ಬೀದರ್: ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಜನಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಶಂಕ್ರಪ್ಪ ಬೊಮ್ಮಾ ಜಾಥಾಕ್ಕೆ ಹಸಿರು ನಿಶಾನೆ ತೋರಿದರು. ಜಾಥಾ ನಗರದ ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಕೊನೆಗೊಂಡಿತು.
ಸರ್ಕಾರಿ ಶುಶ್ರೂಷಕಿಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಶಂಕ್ರೆಪ್ಪ ಬೊಮ್ಮಾ ಮಾತನಾಡಿ, ಡೆಂಗಿ ಪ್ರಕರಣಗಳು ಹೆಚ್ಚಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಂಡು ಬರುತ್ತಿವೆ. ಡೆಂಗಿ, ಚಿಕುನ್‌ಗುನ್ಯಾ ಹರಡುವ ಸೊಳ್ಳೆಗಳ ನಿರ್ಮೂಲನೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಮನೆಗಳಿಗೆ ಭೇಟಿ ಕೊಟ್ಟಾಗ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಆರೋಗ್ಯ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನೆಗಾಗಿ ಸಹಕಾರ ಕೊಟ್ಟರೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಗೊಳಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಜ್ವರ ಸಮೀಕ್ಷೆ ಹಾಗೂ ಲಾರ್ವಾ ಸಮೀಕ್ಷೆ ನಿರ್ಮೂಲನೆ ಕಾರ್ಯವನ್ನು ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರಿಂದ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ಪಾಟೀಲ ಮಾತನಾಡಿ, ರೋಗಗಳ ನಿಯಂತ್ರಣಕ್ಕಾಗಿ ಅಂತರ್ ಇಲಾಖಾ ಸಮನ್ವಯದೊಂದಿಗೆ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ರಾಜಶೇಖರ ಪಾಟೀಲ, ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಅನಿಲ್ ಚಿಂತಾಮಣಿ, ಡಾ.ಶಿವಶಂಕರ ಬಿ., ಡಾ.ದಿಲೀಪ್ ಡೋಂಗ್ರೆ, ಸಂಗಪ್ಪ ಕಾಂಬ್ಳೆ, ಅನಿತಾ, ಓಂಕಾರ್ ಮಲ್ಲಿಗೆ, ಜೇತುಲಾಲ ಪವಾರ್, ಮುಹಮ್ಮದ್ ಅಬೂಬಕರ್, ಅಬ್ದುಲ್ ರಫಿ, ಕಾಶಿನಾಥ, ಎಂ.ಡಿ. ಸಮಿಯುದ್ದೀನ್, ಸತೀಶ ಪಾಂಡೆ, ವೀರಶಟ್ಟಿ ಚನಶೆಟ್ಟಿ, ಶಿವರಾಜ ಸಾಗರ, ಹದಿ ತಬ್ರೇಜ್, ದೇವಿದಾಸ ಗಂಗೆನೋರ್, ಸೋನಾಬಾಯಿ, ಬಸವರಾಜ, ಅನಿಲ್ ಜಾಧವ, ಮಹೆಬೂಬ್‌ಮಿಯ್ಯಾ, ಜಾವೇದ್ ಕಲ್ಯಾಣಕರ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.