ADVERTISEMENT

ಬೀದರ್ | ಮಳೆಯಲ್ಲೇ ಸಡಗರದ ನವರಾತ್ರಿ ಆರಂಭ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:45 IST
Last Updated 23 ಸೆಪ್ಟೆಂಬರ್ 2025, 4:45 IST
ಬೀದರ್‌ನ ಭಗತ್‌ ಸಿಂಗ್‌ ವೃತ್ತದಲ್ಲಿ ಸೋಮವಾರ ಜನ ನವರಾತ್ರಿ ಹಬ್ಬದ ಪೂಜೆಗೆ ಕಬ್ಬು ಖರೀದಿಸಿ ಕೊಂಡೊಯ್ದರು
ಬೀದರ್‌ನ ಭಗತ್‌ ಸಿಂಗ್‌ ವೃತ್ತದಲ್ಲಿ ಸೋಮವಾರ ಜನ ನವರಾತ್ರಿ ಹಬ್ಬದ ಪೂಜೆಗೆ ಕಬ್ಬು ಖರೀದಿಸಿ ಕೊಂಡೊಯ್ದರು   

ಬೀದರ್: ಮಳೆಯ ನಡುವೆಯೇ ನವರಾತ್ರಿ ಉತ್ಸವದ ಧಾರ್ಮಿಕ ವಿಧಿ ವಿಧಾನಗಳು ಸೋಮವಾರ ಜಿಲ್ಲೆಯಾದ್ಯಂತ ಆರಂಭಗೊಂಡವು.

ಮನೆ ಹಾಗೂ ವಿವಿಧ ಮಂದಿರಗಳಲ್ಲಿ ಘಟ ಸ್ಥಾಪನೆ ಮಾಡಿ, ಶ್ರದ್ಧಾ, ಭಕ್ತಿಯಿಂದ ದೇವಿಗೆ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ವಿವಿಧ ಧಾರ್ಮಿಕ ವ್ರತಾಚರಣೆಗಳು ಪ್ರಾರಂಭವಾದವು. ಸೋಮವಾರದಿಂದ ಒಂಬತ್ತು ದಿನಗಳವರೆಗೆ ನಿತ್ಯ ದೇವಿಗೆ ವಿಶೇಷ ಅಲಂಕಾರ, ಪೂಜೆ, ನೈವೇದ್ಯ ಸಮರ್ಪಣೆ, ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ನಗರದ ಕುಂಬಾರವಾಡ, ಚಿದ್ರಿ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಜನರು ಶ್ರದ್ಧಾ, ಭಕ್ತಿಯಿಂದ ಪಾಲ್ಗೊಂಡು, ದೇವರ ದರ್ಶನ ಪಡೆದರು. ಭಾನುವಾರವೇ ದೇವಸ್ಥಾನಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

ADVERTISEMENT

ಖರೀದಿ ಭರಾಟೆ: 

ನವರಾತ್ರಿಯ ಮೊದಲ ದಿನ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಸೋಮವಾರ ಬೆಳಕು ಹರಿಯುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು.

ನಗರದ ಮೋಹನ್‌ ಮಾರ್ಕೆಟ್‌, ಶಿವನಗರದ ವಾಕಿಂಗ್‌ ಪಾತ್‌, ನೌಬಾದ್‌, ಭಗತ್‌ ಸಿಂಗ್‌ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಹಾರೂರಗೇರಿ ಕಮಾನ್‌, ವಿದ್ಯಾನಗರ, ಮೈಲೂರ ಕ್ರಾಸ್‌, ಕುಂಬಾರವಾಡ, ಗುಂಪಾ ರಿಂಗ್‌ ರೋಡ್‌ ಎಲ್ಲೆಡೆ ಜನಜಾತ್ರೆ ಇತ್ತು. 

ಕಬ್ಬು, ಬಾಳೆದಿಂಡು, ಹೂ, ಬೂದುಗುಂಬಳ, ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು, ಹಣ್ಣು, ತರಕಾರಿಯನ್ನು ಜನ ಖರೀದಿಸಿದರು. ಬೆಳಿಗ್ಗೆ ಕೆಲಕಾಲ ಜಿಟಿಜಿಟಿ ಮಳೆಯಾಯಿತು. ಮಳೆಯಲ್ಲೇ ಅಗತ್ಯ ವಸ್ತುಗಳನ್ನು ಖರೀದಿಸಿದರು. ಕೆಲಸಮಯ ಬಿಡುವು ಕೊಟ್ಟ ಮಳೆ ಮಧ್ಯಾಹ್ನದಿಂದ ಬಿರುಸಾಗಿ ಸುರಿಯಿತು. ಆದರೆ, ಅಷ್ಟೊತ್ತಿಗೆ ವ್ಯಾಪಾರ ವಹಿವಾಟು ಬಹುತೇಕ ಪೂರ್ತಿಗೊಂಡಿತ್ತು.

ಪೂಜಾ ಸಾಮಗ್ರಿ ಚಿಕ್ಕ ಮಡಿಕೆಗಳನ್ನು ಖರೀದಿಸಿದ ಜನ
ಬೀದರ್‌ನಲ್ಲಿ ಬಾಲಕನೊಬ್ಬ ಸೋಮವಾರ ಬಾಳೆ ದಿಂಡು ಮಾರಾಟ ಮಾಡಿದ
ಹಬ್ಬಕ್ಕೆ ಹೂ ಬೂದುಗುಂಬಳ ಖರೀದಿಸಿದ ಜನ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.