ADVERTISEMENT

ಆಮ್ಲಜನಕ ಪೂರೈಕೆಗೆ ಅಗತ್ಯ ಕ್ರಮ: ಶರಣು ಸಲಗರ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:26 IST
Last Updated 7 ಮೇ 2021, 4:26 IST
ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರು ಬುಧವಾರ ಕಲಬುರ್ಗಿಯ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಭೇಟಿನೀಡಿ ಸಿಲಿಂಡರ್ ಪೂರೈಸಲು ಕೋರಿದರು
ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರು ಬುಧವಾರ ಕಲಬುರ್ಗಿಯ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಭೇಟಿನೀಡಿ ಸಿಲಿಂಡರ್ ಪೂರೈಸಲು ಕೋರಿದರು   

ಬಸವಕಲ್ಯಾಣ: ಶಾಸಕ ಶರಣು ಸಲಗರ ಅವರು ಬುಧವಾರ ಕಲಬುರ್ಗಿಯ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ತಾಲ್ಲೂಕಿನಲ್ಲಿನ ಕೋವಿಡ್ ಸೋಂಕಿತರಿಗೆ ಅಗತ್ಯವಿದ್ದಷ್ಟು ಸಿಲಿಂಡರ್ ಪೂರೈಸಲು ಕೇಳಿಕೊಂಡಿದ್ದಾರೆ.

‘ಕಲಬುರ್ಗಿಯ ಉತ್ಪಾದನಾ ಘಟಕದಲ್ಲಿ ಪ್ರತಿದಿನ 200 ಜಂಬೋ ಸಿಲಿಂಡರ್‌ನಷ್ಟು ಆಮ್ಲಜನಕ ಉತ್ಪಾದನೆ ಆಗುತ್ತದೆ. ಜಿಲ್ಲಾಧಿಕಾರಿಯಿಂದ ಆದೇಶಪತ್ರ ಒದಗಿಸಿದರೆ ಅಗತ್ಯವಿದ್ದಷ್ಟು ಆಮ್ಲಜನಕ ಪೊರೈಸಲು ಸಿದ್ಧರಿದ್ದೇವೆ ಎಂದು ಅಲ್ಲಿನ ವ್ಯವಸ್ಥಾಪಕರು ಭರವಸೆ ನೀಡಿದ್ದಾರೆ’ ಎಂದು ನಂತರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಕೊರತೆ ಆಗುತ್ತಿದೆ ಎಂದು ಕ್ಷೇತ್ರದ ಜನತೆ ಭಯಪಡುವುದು ಬೇಡ. ಎಂಥ ಪರಿಸ್ಥಿತಿಯಲ್ಲೂ 24 ಗಂಟೆಯೊಳಗೆ ನಮಗೆ ಆಮ್ಲಜನಕದ ಸಿಲಿಂಡರ್‌ಗಳು ದೊರಕುತ್ತವೆ. ಎಷ್ಟೇ ಕಷ್ಟವಾದರೂ ಅದನ್ನು ದೊರಕಿಸಿ ಕೊಡುವುದು ನನ್ನ ಜವಾಬ್ದಾರಿಯಾಗಿದೆ. ಹೀಗಾಗಿ ಇಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಆಗುವುದಿಲ್ಲ. ಆದ್ದರಿಂದ ಎಲ್ಲರೂ ನಿಶ್ಚಿಂತರಾಗಿರಬೇಕು’ ಎಂದು ಅಭಯ ನೀಡಿದ್ದಾರೆ.

ADVERTISEMENT

‘ಕೋವಿಡ್ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ನಿಯಮ ಪಾಲನೆ ಮಾಡಿ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಮಾಸ್ಕ್‌ ಧರಿಸಿ, ಸುರಕ್ಷಿತ ಅಂತರ ಪಾಲಿಸ ಬೇಕು’ ಎಂದು ಕೇಳಿಕೊಂಡಿದ್ದಾರೆ.

ಆಸ್ಪತ್ರೆಗೆ ಭೇಟಿ
ಶಾಸಕ ಶರಣು ಸಲಗರ ಅವರು ನಗರದ ತಾಲ್ಲೂಕು ಆಸ್ಪತ್ರೆಗೆ ಗುರುವಾರ ದಿಢೀರ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

‘ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು. ಯಾವುದೇ ರೀತಿಯಲ್ಲಿ ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸೋಂಕಿತರ ಮೇಲೆ ಸತತವಾಗಿ ನಿಗಾ ಇರಿಸಬೇಕು’ ಎಂದು ಸಲಹೆ ನೀಡಿದರು.

ನಗರದಲ್ಲಿ ಸಂಚರಿಸಿ ಲಾಕ್‌ಡೌನ್ ನಿಯಮ ಪಾಲನೆಗಾಗಿ ಜನರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.