ADVERTISEMENT

ಖಂಡ್ರೆ ಆರೋಪಕ್ಕೆ ಬೆದರಲ್ಲ, ಹೆದರಲ್ಲ :ಸಂಸದ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 19:45 IST
Last Updated 26 ಡಿಸೆಂಬರ್ 2019, 19:45 IST
ಬೀದರ್‌ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸಂಸದ ಭಗವಂತ ಖೂಬಾ ಗುರುವಾರ ಭಾಲ್ಕಿ ತಾಲ್ಲೂಕಿನಲ್ಲಿ ಅನರ್ಹರು ಮನೆಗಳು ಪಡೆದಿರುವ ಪಟ್ಟಿಯನ್ನು ಪ್ರದರ್ಶಿಸಿದರು
ಬೀದರ್‌ನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸಂಸದ ಭಗವಂತ ಖೂಬಾ ಗುರುವಾರ ಭಾಲ್ಕಿ ತಾಲ್ಲೂಕಿನಲ್ಲಿ ಅನರ್ಹರು ಮನೆಗಳು ಪಡೆದಿರುವ ಪಟ್ಟಿಯನ್ನು ಪ್ರದರ್ಶಿಸಿದರು   

ಬೀದರ್‌: ‘ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆಗಳಡಿಯಲ್ಲಿ ನಡೆದಿರುವ ಭಾರಿ ಅವ್ಯವಹಾರದ ತನಿಖೆಗೆ ಶಾಸಕ ಈಶ್ವರ ಖಂಡ್ರೆ ಅವರು ಸಹಕರಿಸಬೇಕು. ಅದನ್ನು ಬಿಟ್ಟು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರೆ ನಾನು ಬೆದರಲ್ಲ, ಹೆದರುವುದೂ ಇಲ್ಲ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

‘ವಸತಿ ಯೋಜನೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಅವ್ಯವಹಾರ ನಡೆದಿದೆ. ಕುಂಬಳಕಾಯಿ ಕಳ್ಳ ಎಂದರೆ ಈಶ್ವರ ಖಂಡ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದಾರೆ. ಬೀದರ್‌ ವರದಿಗಾರರನ್ನು ಭಾಲ್ಕಿಗೆ ಕರೆಯಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದಾರೆ’ ಎಂದು ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಈಶ್ವರ ಖಂಡ್ರೆ ಅವರು ಸಾರ್ವಜನಿಕ ಸಮಾರಂಭದಲ್ಲಿ ಬಾಣಂತಿಯರಿಗೆ ಸರ್ಕಾರದ ಯೋಜನೆಯ ಲಾಭ ದೊರಕಿಸಿಕೊಡಬೇಕು. ಮನೆಗೆ ಕರೆದು ಚೆಕ್‌ ವಿತರಿಸುವುದು ಸರಿಯಲ್ಲ. ಅವರು ಸ್ವಂತ ಮನೆಯಿಂದ ನೆರವು ಕೊಡುತ್ತಿಲ್ಲ. ನೈತಿಕತೆಯ ಪ್ರಶ್ನೆ ಮಾಡುವ ನೈತಿಕತೆ ಅವರಿಗಿಲ್ಲ’ ಎಂದರು.

ADVERTISEMENT

‘ಭಾಲ್ಕಿ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ 200 ಅನರ್ಹರಿಗೆ ಮನೆಗಳನ್ನು ಹಂಚಲಾಗಿದೆ. ಶ್ರೀಮಂತರಿಗೆ ಅಷ್ಟೇ ಅಲ್ಲ, ಒಂದೇ ಕುಟುಂಬದ ನಾಲ್ವರಿಗೆ ಮನೆ ಹಂಚಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ವಸತಿ ಸಚಿವರು ಆದೇಶ ನೀಡಿದ್ದಾರೆ’ ಎಂದು ಹೇಳಿದರು.

‘ಕೆಲವರು ತೋಟಗಳಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೂ, ಬಡವರ ಹೆಸರಲ್ಲಿ ಊರಲ್ಲಿ ಮನೆಗಳನ್ನು ಮಂಜೂರು ಮಾಡಿದ್ದಾರೆ. ಅಂತಹ ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ನಾನು ರಾಜ್ಯ ಸರ್ಕಾರದ ವಿಷಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅರ್ಹ ಬಡವರಿಗೆ ಸರ್ಕಾರದ ಯೋಜನೆಗಳ ಲಾಭ ದೊರಕಬೇಕು ಎನ್ನುವುದು ನನ್ನ ಉದ್ದೇಶವಾಗಿದೆ’ ಎಂದರು.

ಮಾಜಿ ಶಾಸಕ ಸುಭಾಷ ಕಲ್ಲೂರ, ಡಿ.ಕೆ.ಸಿದ್ರಾಮ, ಈಶ್ವರಸಿಂಗ್ ಠಾಕೂರ್, ಜೈಕುಮಾರ ಕಾಂಗೆ, ಸೊಮನಾಥ ಪಾಟೀಲ, ಸಂಗಮೇಶ ನಾಸಿಗಾರ, ರೌಫೋದ್ದಿನ್‌ ಕಚೇರಿವಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.