ADVERTISEMENT

ಔರಾದ್: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ; ಸಮಸ್ಯೆ ಪರಿಹರಿಸಲು ಆಗ್ರಹ

ಕಲುಷಿತ ನೀರು, ಹದಗೆಟ್ಟ ರಸ್ತೆಗಳಿಂದ ಹೈರಾಣಾದ ಗ್ರಾಮಸ್ಥರು

ಮನ್ನಥಪ್ಪ ಸ್ವಾಮಿ
Published 5 ಅಕ್ಟೋಬರ್ 2021, 5:11 IST
Last Updated 5 ಅಕ್ಟೋಬರ್ 2021, 5:11 IST
ಬೆಳಕುಣಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ
ಬೆಳಕುಣಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ   

ಔರಾದ್: ತಾಲ್ಲೂಕಿನ ಬೆಳಕುಣಿ (ಚೌ) ಗ್ರಾಮಸ್ಥರು ಕಳೆದ ಒಂದು ದಶಕದಿಂದ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಗ್ರಾಮಸ್ಥರ ಹೋರಾಟದ ಫಲವಾಗಿ ಎರಡು ಶುದ್ಧ ನೀರಿನ ಘಟಕ ಅಳವಡಿಸಿದರೂ ಅವು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ. ಐದಾರು ವರ್ಷಗಳ ಹಿಂದೆ ಊರ ಮಧ್ಯದಲ್ಲಿ ಒಂದು ಹಾಗೂ ಸರ್ಕಾರಿ ಶಾಲೆ ಬಳಿ ಮತ್ತೊಂದು ನೀರಿನ ಘಟಕ ಕೂಡಿಸಿದ್ದಾರೆ. ಸದ್ಯ ಈ 2 ಘಟಕಗಳು ಉಪಯೋಗವಾಗದೆ ಜನ ಶುದ್ಧ ನೀರಿಗಾಗಿ ಪರದಾಡಬೇಕಿದೆ.

ಈಗ ಮಳೆಗಾಲ ಇದೆ. ಕೊಳವೆ ಬಾವಿ ಹಾವಿ ಹಾಗೂ ನಲ್ಲಿ ನೀರು ಸರಿ ಬರುತ್ತಿಲ್ಲ. ಕಲುಷಿತ ನೀರು ಸೇನೆಯಿಂದ ಗ್ರಾಮದಲ್ಲಿ ವಾಂತಿಬೇಧಿ ಜಾಸ್ತಿಯಾಗಿದೆ. ಮಕ್ಕಳು ಅನಾರೋಗ್ಯದ ಸಮಸ್ಯೆಯಿಂದ ನರಳುತ್ತಿದ್ದಾರೆ ಎಂದು ನಿವಾಸಿ ಜಾವೀದ್ ಹೇಳುತ್ತಾರೆ.

ADVERTISEMENT

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜನರಿಗೆ ಉಪಯೋಗವಾಗದ ಈ ನೀರಿನ ಘಟಕ ಯಾರಿಗೆ ಬೇಕು? ಹೆಸರಿಗೆ ಮಾತ್ರ ಘಟಕ ಅಳವಡಿಸಿ ಜನರಿಗೆ ಸರ್ಕಾರದ ಸೌಲಭ್ಯದಿಂದ ವಂಚಿಸು ತ್ತಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮದ ಮುಖಂಡ ಅರವಿಂದ
ಮಲ್ಲಿಗೆ ಆಗ್ರಹಿಸಿದ್ದಾರೆ.

ಔರಾದ್- ಬೆಳಕುಣಿ ನಡುವಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲೆ ಕಾಲೇಜಿಗೆ ಹೋಗಲು ತೊಂದರೆಯಾಗಿದೆ. ಇನ್ನು ಬೀದರ್-ಭಾಲ್ಕಿಗೆ ಹೋಗುವ ದಾರಿಯಲ್ಲಿನ ಸೇತುವೆ ಶಿಥಿಲಗೊಂಡಿದೆ. ಈಚೆಗೆ ಸುರಿದ ಮಳೆಯಿಂದ ಅರ್ಧ ಭಾಗ ಕೊಚ್ಚಿ ಹೋಗಿದೆ. ಹೀಗಾಗಿ ಸ್ವಲ್ಪ ಮಳೆಯಾದರೂ ಬೀದರ್-ಭಾಲ್ಕಿ ನಡುವಿನ ಸಂಪರ್ಕ ಕಡಿತವಾಗುತ್ತದೆ. ಈ ಕುರಿತು ಸಾಕಷ್ಟು ಬಾರಿ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಬೆಳಕುಣಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಇದೆ. ಆದರೆ ಇಲ್ಲಿ ಎರಡು ತಿಂಗಳಿನಿಂದ ಪಿಡಿಒ ಇಲ್ಲ. ತಕ್ಷಣ ಹೊಸ ಪಿಡಿಒ ನೇಮಕ ಮಾಡಬೇಕು. ಈಗ ಮಳೆಗಾಲ ಇರುವುದರಿಂದ ಚರಂಡಿ ಸ್ವಚ್ಛ ಮಾಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಮೂಲದ ಬಳಿ ಹೊಲಸು ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಬೇಕು ಎಂದು ಜನ ಬೇಡಿಕೆ ಮಂಡಿಸಿದ್ದಾರೆ.

ಬಸ್ ಸೌಲಭ್ಯ ಕಲ್ಪಿಸಲು ಮನವಿ

‘ನಮ್ಮ ಊರಿಗೆ ಸಾರಿಗೆ ಸಮಸ್ಯೆಯೂ ಇದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಒಂದು ಬಾರಿ ಮಾತ್ರ ಬಸ್ ಬರುತ್ತದೆ. ಉಳಿದ ಸಮಯದಲ್ಲಿ 3 ಕಿ.ಮೀ. ನಡೆದುಕೊಂಡು ಹೋಗಿ ಬಸ್ ಹತ್ತಬೇಕಾಗಿದೆ. ಇದರಿಂದ ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ’ ಪಾಲಕರು ಗೋಳು ತೋಡಿಕೊಂಡಿದ್ದಾರೆ.

***

ಕೆಲ ಗ್ರಾಮಗಳ ಘಟಕಗಳನ್ನು ದುರಸ್ತಿ ಮಾಡಲಾಗಿದೆ. ಬೆಳಕುಣಿ ಗ್ರಾಮಕ್ಕೆ ಭೇಟಿ ನೀಡಿ ಶುದ್ಧ ನೀರಿನ ಘಟಕ ಖುದ್ದಾಗಿ ಪರಿಶೀಲಿಸಲಾಗುವುದು. ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ

- ಸುಭಾಷ, ಎಂಜಿನಿಯರ್, ಜಿ.ಪಂ. ಕುಡಿಯುವ ನೀರು ಸರಬರಾಜು ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.