
ಔರಾದ್: ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ವಿವಿಧೆಡೆ ರಸ್ತೆಯ ಮೇಲೆ ಗುಂಡಿಗಳು ಬಿದ್ದು ಸುಗಮ ಸಂಚಾರಕ್ಕೆ ಕುತ್ತು ಬಂದಿದೆ.
ತಾಲ್ಲೂಕಿನ ಇಟಗ್ಯಾಳದಿಂದ ಕರಂಜಿ (ಬಿ) ವರೆಗಿನ 8 ಕಿ.ಮೀ. ರಸ್ತೆ ಅಧೋಗತಿಗೆ ತಲುಪಿದ್ದು, ಈ ರಸ್ತೆ ಮೇಲೆ ನಡೆಯಲು ಸರ್ಕಸ್ ಮಾಡಬೇಕಿದೆ. ರಾತ್ರಿ ವೇಳೆ ಅನೇಕ ಬೈಕ್ ಸವಾರರು ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಈ ಕೆಟ್ಟ ರಸ್ತೆಯಿಂದ ವಾಹನ ಓಡಾಟವೂ ಸ್ಥಗಿತವಾಗಿದೆ. ಇದರಿಂದ ಇಟಗ್ಯಾಳ ನಾಗಮಾರಪಳ್ಳಿ, ರಾಯಪಳ್ಳಿ, ಕರಂಜಿ (ಬಿ) ಗ್ರಾಮಗಳ ವಿದ್ಯಾರ್ಥಿಗಳು, ಸಾರ್ವಜನಿಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಈ ರಸ್ತೆ ಹಾಳಾಗಿದೆ. ತೆಲಂಗಾಣದಿಂದ ಮರಳು ಲಾರಿ ಓಡಾಡುತ್ತಿರುವುದರಿಂದ ರಸ್ತೆ ಹೆಚ್ಚು ಹಾಳಾಗಿದೆ. ದುರಸ್ತಿ ಮಾಡುವಂತೆ ಸಂಬಂಧಿತರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಕರಂಜಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜಕುಮಾರ ನಾಯ್ಕ ತಿಳಿಸಿದ್ದಾರೆ.
ಇಟಗ್ಯಾಳ ರಾಯಪಳ್ಳಿ, ಕರಂಜಿ ಗ್ರಾಮದ ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣ ಓದಲು ನಾಗಮಾರಪಳ್ಳಿಗೆ ಬರಬೇಕು. ಆದರೆ ಗುಂಡಿ ರಸ್ತೆಯಿಂದ ಸಮಸ್ಯೆಯಾಗುತ್ತಿದೆ ಎಂದು ಅಲ್ಲಿಯ ಸ್ಥಳೀಯ ನಿವಾಸಿ ರಾಜಕುಮಾರ ಘಾಟೆ ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಮತ್ತೊಂದು ಗಡಿ ರಸ್ತೆ ಕೌಠಾ (ಕೆ)- ವಡಗಾಂವ್ (ಡಿ) ನಡುವಿನ 12 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆ ಗುಂಡಿಗಳಿಗೆ ಅಂಜಿ ವಾಹನ ಓಡಾಟ ಸ್ಥಗಿತಗೊಂಡಿದೆ. ಈ ರಸ್ತೆ ವ್ಯಾಪ್ತಿಯಲ್ಲಿ ಬರುವ ಪಾಶಾಪೂರ, ಗಡಿಕುಶನೂರ, ಆಲೂರ (ಕೆ), ಆಲೂರ (ಬಿ) ಬನಸಿ ತಾಂಡಾದ ಜನ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ತುಂಬಾ ತೊಂದರೆ ಎದುರಿಸಬೇಕಾಗಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಿಗಳು, ನಿತ್ಯ ಕೂಲಿಗೆ ಹೋಗುವ ಜನ ಸಮಸ್ಯೆಯಲ್ಲಿದ್ದಾರೆ. ಈ ರಸ್ತೆ ನಡುವೆ ಇರುವ ಸೇತುವೆ ತಡೆಗೋಡೆಯೂ ಕಿತ್ತು ಹೋಗಿದೆ. ಇದರಿಂದ ಪ್ರಯಾಣಿಕರಲ್ಲಿ ಭೀತಿ ಆವರಿಸಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅನೇಕ ಸಲ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೂ ನಮ್ಮ ಊರಿನ ರಸ್ತೆ ಗುಂಡಿಗಳಿಗೆ ಮುಕ್ತಿ ಸಿಗುತ್ತಿಲ್ಲ ಎಂದು ಬೇಲೂರ ನಿವಾಸಿ ಸಂಜುಕುಮಾರ ತಿಳಿಸಿದ್ದಾರೆ.
ಔರಾದ್ ತಾಲ್ಲೂಕಿನ ಇಟಗ್ಯಾಳ-ಕರಂಜಿ (ಕೆ) ನಡುವಿನ ರಸ್ತೆ ದುರಸ್ತಿಗಾಗಿ ನಾವು ಸಾಕಷ್ಟು ಸಲ ಮನವಿ ಸಲ್ಲಿಸಿದ್ದೇವೆ. ಈಗ ಮಳೆಗಾಲ ಮುಗಿದಿದೆ. ದುರಸ್ತಿ ಕೆಲಸ ಶುರುವಾಗದಿದ್ದರೆ ಹೋರಾಟ ಮಾಡುತ್ತೇವೆರಾಜಕುಮಾರ ನಾಯ್ಕ ಸಾಮಾಜಿಕ ಕಾರ್ಯಕರ್ತ
‘ಅನುಮೋದನೆ ಬಳಿಕ ಕೆಲಸ ಶುರು’
‘ಔರಾದ್ ತಾಲ್ಲೂಕಿನ ಕೌಠಾ (ಕೆ)ಯಿಂದ ವಡಗಾಂವ್ ಹಾಗೂ ಇಟ್ಯಾಳ ಕರಂಜಿ ರಸ್ತೆ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಬಳಿಕ ಕೆಲಸ ಶುರು ಮಾಡುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರೇಮಸಾಗರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.