ಬ್ರಿಮ್ಸ್ ನೆಲಮಹಡಿಯಲ್ಲಿ ಸಂಗ್ರಹವಾಗಿರುವ ನೀರು
–ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ನೆಲಮಹಡಿ ಸಮಸ್ಯೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಆಸ್ಪತ್ರೆಯ ನೆಲಮಹಡಿಯಲ್ಲಿ ಪುರಾತನ ಬಾವಿಯಿದ್ದು, ಅದರಿಂದ ಸತತವಾಗಿ ನೀರು ಹೊರಬಂದು ಸಂಗ್ರಹವಾಗುತ್ತಿದೆ. ಈ ಸಮಸ್ಯೆಯನ್ನು ಕೊನೆಗಾಣಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ತಂತ್ರಜ್ಞರ ನೆರವು ಪಡೆಯಲಾಗಿದೆ.
ಶಾಶ್ವತ ಪರಿಹಾರಕ್ಕೆ ವಿಸ್ತೃತವಾದ ಯೋಜನೆ ರೂಪಿಸಿ, ಮಾಹಿತಿ ಸಲ್ಲಿಸಿದೆ. ₹3 ಕೋಟಿ ವೆಚ್ಚದ ಕಾಮಗಾರಿಗೆ ಶಿಫಾರಸು ಮಾಡಿದೆ. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನಷ್ಟೇ ಕಾಮಗಾರಿ ಕೈಗೆತ್ತಿಕೊಳ್ಳಲು, ಟೆಂಡರ್ ಕರೆಯಲು ಆಡಳಿತಾತ್ಮಕ ಅನುಮೋದನೆ ಸಿಗಬೇಕಿದೆ.
ನಿಲ್ಲದ ನೀರಿನ ಸಂಗ್ರಹ: ಬ್ರಿಮ್ಸ್ ನೆಲಮಹಡಿಯಲ್ಲಿ ನೀರು ಸಂಗ್ರಹವಾಗುವುದು ಈಗಲೂ ನಿಂತಿಲ್ಲ. ಬೇಸಿಗೆಯಲ್ಲೂ ಅಪಾರ ಪ್ರಮಾಣದ ನೀರು ನೆಲಮಹಡಿಯಲ್ಲಿ ಸಂಗ್ರಹಗೊಂಡಿದೆ. ಇಡೀ ನೆಲಮಹಡಿಯಲ್ಲಿ ನೀರು ಆವರಿಸಿಕೊಂಡಿದ್ದು, ಯಾರೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸತತವಾಗಿ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ನೆಲಮಹಡಿ ದುರ್ಬಲವಾಗುತ್ತಿದೆ. ಈಗಲೂ ಮೋಟಾರ್ ಸಹಾಯದಿಂದ ನೀರು ಹೊರಹಾಕಲಾಗುತ್ತಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಅಲ್ಲಿರುವ ಹಳೆಯ ಬಾವಿನಿಂದ ನೀರು ಸತತ ಸಂಗ್ರಹವಾಗುತ್ತಲೇ ಇದೆ.
‘ಹೋದ ಸೆಪ್ಟೆಂಬರ್‌ನಲ್ಲಿ ಅಪಾರ ನೀರು ಸಂಗ್ರಹಗೊಂಡು, ವಿದ್ಯುತ್ ಪೂರೈಕೆ ಸ್ಥಗಿತಗೊಂಡ ನಂತರ ದೊಡ್ಡ ಸಮಸ್ಯೆ ಸೃಷ್ಟಿಯಾಗಿತ್ತು. ಈಗಲೂ ಆ ಘಟನೆ ನೆನಪಿಸಿಕೊಂಡರೆ ಭಯವಾಗುತ್ತದೆ. ಹಳೆಯ ತಪ್ಪಿನಿಂದ ಪಾಠ ಕಲಿತು ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಬೇಕಿತ್ತು. ಆದರೆ, ಇದುವರೆಗೆ ಆ ನಿಟ್ಟಿನಲ್ಲಿ ಯಾವುದೇ ಕೆಲಸ ಆಗಿಲ್ಲ. ಬೇಸರದ ಸಂಗತಿ’ ಎಂದು ಹೆಸರು ಹೇಳಲಿಚ್ಛಿಸದ ಬ್ರಿಮ್ಸ್ ಹಿರಿಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
2024ರ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯ ನಂತರ ನೆಲಮಹಡಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಅಲ್ಲಿದ್ದ ವಿದ್ಯುತ್ ಪ್ಯಾನಲ್, ಜನರೇಟರ್‌ನೊಳಗೆ ನೀರು ನುಗ್ಗಿ, ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಆಸ್ಪತ್ರೆಯ ಮೂರು ಮತ್ತು ಆರನೇ ಮಹಡಿಯ ನವಜಾತ ಶಿಶು ಘಟಕದಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ನವಜಾತ ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ, ಜೀವ ಉಳಿಸಲಾಗಿತ್ತು. ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದ ರೋಗಿಯೊಬ್ಬರಿಗೆ ಕೈಪಂಪ್ ಸಹಾಯದಿಂದ ಆಕ್ಸಿಜನ್ ಪೂರೈಸಿ ಜೀವ ಉಳಿಸಿದ ಘಟನೆಯೂ ನಡೆದಿತ್ತು. ಅಗ್ನಿಶಾಮಕ ದಳದವರ ನೆರವಿನೊಂದಿಗೆ ನೀರು ತೆರವುಗೊಳಿಸಲಾಗಿತ್ತು. ಬಳಿಕ ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಸೆಪ್ಟೆಂಬರ್ 3 ಮತ್ತು 4ರ ನಡುವೆ ಘಟನೆ ಜರುಗಿತ್ತು. ಇದಾದ ನಂತರ ಸೆಪ್ಟೆಂಬರ್ 6ರಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ‘ತುರ್ತಾಗಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಅಗತ್ಯಬಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಕೂಡ ಬಳಸಿಕೊಳ್ಳಲಾಗುವುದು’ ಎಂದು ಹೇಳಿದ್ದರು.
₹3 ಕೋಟಿ ಮೊತ್ತದ ಯೋಜನಾ ವರದಿ ಈಗಾಗಲೇ ಸಿದ್ಧವಾಗಿದ್ದು ಆಡಳಿತಾತ್ಮಕ ಅನುಮೋದನೆ ಪಡೆದ ನಂತರ ಕೆಲಸ ಶುರುವಾಗಲಿದೆ.ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ ಬೀದರ್
ಬೆಂಗಳೂರಿನಿಂದ ಬಂದಿದ್ದ ತಂತ್ರಜ್ಞರ ತಂಡವು ನೀರು ಸಂಗ್ರಹವಾಗದಂತೆ ಯೋಜನೆ ರೂಪಿಸಿದ್ದು ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ.–ಶಿವಕುಮಾರ ಶೆಟಕಾರ ನಿರ್ದೇಶಕ ಬ್ರಿಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.