ADVERTISEMENT

ಸೋಂಕಿತರಿಗೆ ಸಮರ್ಪಕ ಚಿಕಿತ್ಸೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 16:43 IST
Last Updated 20 ಏಪ್ರಿಲ್ 2021, 16:43 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಬೀದರ್: ‘ಆಸ್ಪತ್ರೆಗೆ ದಾಖಲಾಗುವ ಕೋವಿಡ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು. ಯಾವುದೇ ರೀತಿಯ ದೂರುಗಳಿಗೆ ಅವಕಾಶ ನೀಡಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಬಸವಕಲ್ಯಾಣ ಉಪ ಚುನಾವಣೆ ವೇಳೆ ಕೋವಿಡ್ ಸೋಂಕಿತರೊಬ್ಬರು ತಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಸ್ವಗ್ರಾಮದ ಮನೆಯ ಹತ್ತಿರ ಕೋವಿಡ್‍ನಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಪ್ರಯುಕ್ತ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‍ನ ಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.

‘ಬಸವಕಲ್ಯಾಣ ಉಪ ಚುನಾವಣೆ ಹಾಗೂ ಬೀದರ್ ನಗರಸಭೆ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳ ಸಭೆ ನಡೆಸಲು ಆಗಿಲ್ಲ. ಮನೆಯಲ್ಲಿದ್ದುಕೊಂಡೇ ಕೋವಿಡ್ ಸ್ಥಿತಿಗತಿಯ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಬ್ರಿಮ್ಸ್ ನಿರ್ದೇಶಕ, ತಾಲ್ಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದೇನೆ. ಆಸ್ಪತ್ರೆಗೆ ದಾಖಲಾದ ಸೋಂಕಿತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದ್ದೇನೆ’ ಎಂದು ಹೇಳಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಈವರೆಗೆ 1,61,433 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 15,251 ಮಂದಿ ಕೋವ್ಯಾಕ್ಸಿನ್ ಹಾಗೂ 1,46,182 ಜನ ಕೋವಿಶೀಲ್ಡ್ ಪಡೆದಿದ್ದಾರೆ. ಪ್ರತಿದಿನ 3,500 ಜನರ ಸ್ಯಾಂಪಲ್ ಪರೀಕ್ಷೆ ಗುರಿ ನಿಗದಿಪಡಿಸಿದ್ದು, ಅದರಂತೆ ಪರೀಕ್ಷೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

‘ಕೋವಿಡ್‍ನಿಂದ 479 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2,574 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದಾರೆ. ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಸಂಗ್ರಹಿಸಿಕೊಂಡಿರಬೇಕು. ಶಿಫ್ಟ್ ಆಧಾರದಲ್ಲಿ ದಿನದ 24 ಗಂಟೆಯೂ ವೈದ್ಯರು ರೋಗಿಗಳೊಂದಿಗಿದ್ದು, ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

‘ಜಿಲ್ಲೆಯಲ್ಲಿ ಬೆಡ್‍ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್‍ಗಳ ವ್ಯವಸ್ಥೆ ಮಾಡಬೇಕು. ಅಗತ್ಯವಿರುವ ಸೋಂಕಿತರಿಗೆ ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಔಷಧಿ ಪೂರೈಸಲು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಮಾರ್ಗಸೂಚಿ ಪಾಲಿಸಿ: ‘ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯಾವುದೇ ಸಮಸ್ಯೆಯಿದ್ದಲ್ಲಿ ಪ್ರಶಾಂತ ಪವಾರ್ (9980218156), ದಿಲೀಪ್ ಚವಾಣ್ (9770701777), ಜೈಪಾಲ್ ರಾಠೋಡ್ (9901108283) ಅಥವಾ ಸಚಿವರ ಕಚೇರಿ ದೂರವಾಣಿ ಸಂಖ್ಯೆ 084822-20400 ಅಥವಾ ಮೊ:9731415152ಗೆ ಸಂಪರ್ಕಿಸ ಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.