ಕಮಠಾಣ(ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ ಅರಣ್ಯ ಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾಗಿರುವ ಇಂಗು ಗುಂಡಿಗಳು, ಮಣ್ಣು ಹಾಗೂ ತೇವಾಂಶ ಸಂರಕ್ಷಣೆಗೆ ಸಹಕಾರಿಯಾಗಿವೆ.
ಮಳೆಯ ಕಾರಣ ಇಂಗುಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ಅವುಗಳ ಅಕ್ಕ ಪಕ್ಕದಲ್ಲಿ ನೆಡಲಾದ ಸಸಿಗಳು ಹಸಿರಿನಿಂದ ನಳ ನಳಿಸುತ್ತಿವೆ. ಅರಣ್ಯದಲ್ಲಿ ನರೇಗಾ ಯೋಜನೆ ಅಡಿಯಲ್ಲಿ 4 ಮೀ. ಉದ್ದ, ಅರ್ಧ ಮೀಟರ್ ಅಗಲ ಹಾಗೂ ಅರ್ಧ ಮೀಟರ್ ಆಳದ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಇಂಗು ಗುಂಡಿಯು 1 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
2025-26ನೇ ಸಾಲಿನ ನರೇಗಾ ಯೋಜನೆ ನೆರವಿನಿಂದ ಕಮಠಾಣ ಅರಣ್ಯ ಪ್ರದೇಶದಲ್ಲಿ ಒಂದು ಸಾವಿರ ಇಂಗು ಗುಂಡಿಗಳನ್ನು ಅಗೆಯಲಾಗಿದೆ. 6 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸುತ್ತಾರೆ ಬೀದರ್ ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಶಿವಕುಮಾರ ರಾಠೋಡ್.
ನರೇಗಾ ಯೋಜನೆಯಡಿ ಒಟ್ಟು 1,600 ಇಂಗು ಗುಂಡಿಗಳನ್ನು ನಿರ್ಮಿಸುವ ಗುರಿಯಿದೆ. ಈಗಾಗಲೇ ಅಗೆಯಲಾದ ಇಂಗು ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಅರಣ್ಯ ಪ್ರದೇಶದಲ್ಲಿ ಮಣ್ಣು, ತೇವಾಂಶ ಸಂರಕ್ಷಣೆ ಜತೆಗೆ ಅಂತರ್ಜಲ ವೃದ್ಧಿಸಿದೆ. ಮರಗಳು ಸಮೃದ್ಧವಾಗಿ ಬೆಳೆಯಲು ಅನುಕೂಲವಾಗಿದೆ ಎಂದು ಹೇಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಇನ್ನೂ 600 ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು. ಯೋಜನೆಯಡಿ 1,600 ಕಂದಕ ನಿರ್ಮಾಣ ಹಾಗೂ ಸಸಿ ನೆಡುವಿಕೆಗೆ ₹ 9.88 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.