ಬೀದರ್: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಆಡಳಿತ ಮಂಡಳಿಗೆ ಶನಿವಾರ (ಸೆ.27) ನಡೆಯಬೇಕಿದ್ದ ಚುನಾವಣೆಗೆ ಕಲಬುರಗಿ ಹೈಕೋರ್ಟ್ ಸಂಚಾರಿ ಪೀಠ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದ್ದು, ತಡೆಯಾಜ್ಞೆ ನೀಡಬೇಕೆಂದು ಬಿಜೆಪಿ ಮುಖಂಡರಾದ ರಾಜಶೇಖರ ನಾಗಮೂರ್ತಿ, ದಯಾನಂದ ವಿಶ್ವಂಭರ ಶಾಸ್ತ್ರಿ ಹಾಗೂ ಬಸವರಾಜ ಗುಣವಂತರಾವ ಪಾಟೀಲ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯ ತಡೆ ನೀಡಿದೆ ಎಂದು ವಕೀಲ ಗೌರೀಶ ಎಸ್. ಕಾಶೆಂಪುರ್ ತಿಳಿಸಿದ್ದಾರೆ.
25 ಸಾವಿರ ಷೇರುದಾರರನ್ನು ಕಾರ್ಖಾನೆ ಒಳಗೊಂಡಿದೆ. ಆದರೆ, ಮತದಾರರ ಪಟ್ಟಿಯಲ್ಲಿ 4 ರಿಂದ 5 ಸಾವಿರ ಮತದಾರರ ಹೆಸರುಗಳಿವೆ. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿದ್ದು, ಚುನಾವಣೆ ಮುಂದೂಡಬೇಕೆಂದು ಜಿಲ್ಲಾ ಬಿಜೆಪಿ ಆಗ್ರಹಿಸಿತ್ತು. ಇನ್ನೊಂದೆಡೆ ಪಕ್ಷದ ಮುಖಂಡರು ಕೋರ್ಟ್ ಮೊರೆ ಹೋಗಿದ್ದರು.
ಈ ಸಲದ ಚುನಾವಣೆಯಲ್ಲಿ ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಭಾರಿ ಪ್ರಚಾರದಲ್ಲಿ ತೊಡಗಿದೆ. ಮಿತ್ರ ಪಕ್ಷ ಜೆಡಿಎಸ್ ತೆಕ್ಕೆಯಲ್ಲಿ ಕಾರ್ಖಾನೆ ಇದ್ದು, ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ.
ಶನಿವಾರ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹತ್ತು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.