ಹುಲಸೂರ: ಮೊಬೈಲ್ ಆನ್‌ಲೈನ್ ಗೇಮ್‌ನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಳಿಕ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಲ್ಲೂಕಿನ ಬೇಲೂರ ಗ್ರಾಮದ ವಿಜಯಕುಮಾರ್ ಜಗನ್ನಾಥ್ ಹೊಳ್ಳೆ(25) ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ.
ಆನ್‌ಲೈನ್ ಗೇಮಿಂಗ್‌ನಲ್ಲಿ ₹1.5 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡು ಮನನೊಂದ ಯುವಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಡಿ.ಫಾರ್ಮ್ ಪದವೀಧರನಾದ ವಿಜಯಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.
ಕೆಲ ತಿಂಗಳಿಂದ ಆನ್‌ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಸಿಲುಕಿ ಸಾಲ ಮಾಡಿಕೊಂಡಿದ್ದನು. ಇದಕ್ಕೆ ಕುಟುಂಬಸ್ಥರು ಎರಡು–ಮೂರು ದಿನಗಳಲ್ಲಿ ಹಣ ಹೊಂದಿಸಿಕೊಡುತ್ತೇವೆ. ಚಿಂತಿಸಬೇಡ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ. ಆದರೆ, ಸಾಲಕ್ಕೆ ಹೆದರಿದ ಯುವಕ ಡಿ.25ರಂದು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಗ್ರಾಮ ಸಮೀಪದ ಜ್ಯೋತಿ ತಾಂಡಾ ಬಳಿ ಹೋಗಿ ಮೈಮೇಲೆ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು.
ಶೇ 80ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವಕನನ್ನು ಸ್ಥಳೀಯರು ಭಾಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೀದರ್ ಬ್ರಿಮ್ಸ್‌ಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಉಮ್ಮರ್ಗಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಸುಕಿನ ಜಾವ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಿಷೇಧಕ್ಕೆ ಆಗ್ರಹ: ಬಸವಕಲ್ಯಾಣ ಶಾಸಕ ಶರಣು ಸಲಗರ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ವಿಜಯಕುಮಾರ್, ‘ಕಳೆದ ಏಳೆಂಟು ವರ್ಷಗಳಿಂದ ಆನ್‌ಲೈನ್ ಗೇಮ್ಸ್ ಆಡುತ್ತಿದ್ದೇನೆ. ಇದರಿಂದ ಹಣ ಬರುತ್ತೆ ಎಂಬ ಆಸೆಯಿಂದ ಚಟಕ್ಕೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡಿದ್ದೇನೆ. ಆದರೆ ಗೇಮ್ಸ್‌ನಿಂದ ಯಾವುದೇ ಲಾಭವಿಲ್ಲ. ಇಂತಹ ಮೋಸದಾಟ ಯಾರೂ ಆಡಬೇಡಿ. ಆನ್‌ಲೈನ್ ಗೇಮ್ಸ್ ನಿಷೇಧಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೂ ಒತ್ತಾಯಿಸಿದ್ದನು ಎಂದು ತಿಳಿದುಬಂದಿದೆ.
ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.