ಬಸವಕಲ್ಯಾಣ: ‘ಮುದ್ರಣ ಹಾಗೂ ದೃಶ್ಯ ಮಾಧ್ಯಮ ಸಮಾಜದ ನೈಜ ಚಿತ್ರಣ ಜನರ ಮುಂದಿಡಬೇಕು. ಬದ್ಧತೆ, ಪ್ರಾಮಾಣಿಕತೆ ತೋರಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಲ್ಹಾದ್ ಚೆಂಗಟೆ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಘಟಕದಿಂದ ಮಂಗಳವಾರ ನಡೆದ ‘ಮಾಧ್ಯಮ ಮತ್ತು ಯುವಜನತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಯುವಜನತೆ ಮೊದಲೇ ದಾರಿ ತಪ್ಪುತ್ತಿದೆ. ಇಂಥದರಲ್ಲಿ ಮಾಧ್ಯಮ ತಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸದಿದ್ದರೆ ಮುಂದೆ ಆಗುವ ಕೆಟ್ಟ ಪರಿಣಾಮಗಳಿಗೆ ಹೊಣೆ ಆಗಬೇಕಾಗುತ್ತದೆ. ಪಕ್ಷಪಾತದ ಆರೋಪ ಇಲ್ಲದಂತಾಗಿಸಿ ಕಾಳಜಿ ತೋರಿ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು. ದೇಶದ ಅಭಿವೃದ್ಧಿಗೆ ದೊಡ್ಡ ಕಾಣಿಕೆ ನೀಡಬೇಕು’ ಎಂದರು.
ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ಭೀಮಾಶಂಕರ ಬಿರಾದಾರ ಮಾತನಾಡಿ,‘ಪತ್ರಿಕೆಗಳು ಮತ್ತು ಪುಸ್ತಕಗಳು ಹಲವು ಬಿಕ್ಕಟ್ಟುಗಳಿಂದ ಬಿಡುಗಡೆಗೊಳ್ಳಲು ಸಹಕಾರಿಯಾಗಿವೆ. ಇವುಗಳಿಂದ ವೈಚಾರಿಕತೆ ಮತ್ತು ವೈಜ್ಞಾನಿಕತೆ ಬಿತ್ತರಿಸಿ ಹೊಸ ಜಗತ್ತು ಸೃಷ್ಟಿಸಲು ಸಾಧ್ಯ’ ಎಂದರು.
ಸಾಹಿತಿ ಬಾಲಾಜಿ ಕುಂಬಾರ ಮಾತನಾಡಿ,‘ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಮಾಧ್ಯಮಗಳು ಗ್ರಾಮೀಣ ಹಾಗೂ ನಗರಗಳಲ್ಲಿನ ಕುಂದು ಕೊರತೆಯನ್ನು ಮಂಡಿಸಿವೆ. ಈ ಮೂಲಕ ಸರ್ಕಾರದ ಕಣ್ಣು ತೆರೆಸಿ ತಮ್ಮ ಕೆಲಸ ಸಮರ್ಥವಾಗಿ ನಿಭಾಯಿಸುತ್ತ ಬಂದಿವೆ. ಎಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಚಲನಶೀಲತೆ ಬಿಟ್ಟುಕೊಟ್ಟಿಲ್ಲ. ಜಾಲತಾಣದ ಸೌಕರ್ಯದಿಂದಾಗಿ ಸಮಸ್ಯೆಗಳ ನಿಜ ಪ್ರತಿಬಿಂಬ ಎದ್ದು ಕಾಣುತ್ತಿದೆ’ ಎಂದು ಹೇಳಿದರು.
ಸಂಯೋಜಕ ಚಂದ್ರಕಾಂತ ಗಾಯಕವಾಡ, ಮೀನಾಕ್ಷಿ ಬಿರಾದಾರ ಹಾಗೂ ಶ್ರೀಕಾಂತ ಚವ್ಹಾಣ ಮಾತನಾಡಿದರು.
ಉಪನ್ಯಾಸಕರಾದ ಸುಭಾಷ ಮಚಕೂರಿ, ಶರಣಬಸಪ್ಪ ಜನ್ನಾ, ಪೀರಪ್ಪ ಸಜ್ಜನ್, ಬಸವರಾಜ ಬಿರಾದಾರ, ಚನ್ನಮ್ಮ, ಮಹೇಶ ಮಂಠಾಳೆ, ಅಂಜಲಿ ಗಜರೆ, ಫರೀದ್, ಸುಸ್ಮೀತಾ, ಅನಿಲ ಚಾಂದೆ, ಭಾಗ್ಯಶ್ರೀ ಹಾಗೂ ನರೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.