ADVERTISEMENT

ನಮ್ಮ ಅಭ್ಯರ್ಥಿಗೇ ಗೆಲುವು

ಬಿಜೆಪಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 14:33 IST
Last Updated 24 ಮಾರ್ಚ್ 2019, 14:33 IST
ಬೀದರ್‌ನಲ್ಲಿ ಭಾನುವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಬೀದರ್‌ ಲೋಕ ಸಭಾಕ್ಷೇತ್ರದ ಬಿಜೆಪಿ ಉಸ್ತುವಾರಿ ಅಮರನಾಥ ಪಾಟೀಲ ಮಾತನಾಡಿದರು
ಬೀದರ್‌ನಲ್ಲಿ ಭಾನುವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಬೀದರ್‌ ಲೋಕ ಸಭಾಕ್ಷೇತ್ರದ ಬಿಜೆಪಿ ಉಸ್ತುವಾರಿ ಅಮರನಾಥ ಪಾಟೀಲ ಮಾತನಾಡಿದರು   

ಬೀದರ್‌: ಲೋಕಸಭಾ ಚುವಾಣೆ ಪ್ರಯುಕ್ತ ಬಿಜೆಪಿ ಹಾಗೂ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರು ಭಾನುವಾರ ಬೆಳಿಗ್ಗೆ ದಿಢೀರ್‌ ತಮ್ಮ ಪಕ್ಷದ ಕಚೇರಿಗಳಲ್ಲಿ ಪತ್ರಿಕಾಗೋಷ್ಠಿ ಕರೆದು ‘ನಮ್ಮ ಪಕ್ಷದ ಅಭ್ಯರ್ಥಿಯೇ’ ಚುನಾವಣೆಯಲ್ಲಿ ಎರಡು ಲಕ್ಷಗಳ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ ಪತ್ರಿಕಾಗೋಷ್ಠಿಗೆ ಅಭ್ಯರ್ಥಿ ಈಶ್ವರ ಖಂಡ್ರೆ ಬಂದಿರಲಿಲ್ಲ. ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಭಗವಂತ ಖೂಬಾ ಹಾಜರಿದ್ದರೂ ಮಾತನಾಡಲಿಲ್ಲ. ಇದೇ ಅವಧಿಯಲ್ಲಿ ಉಭಯ ಪಕ್ಷಗಳು ಪದಾಧಿಕಾರಿಗಳ ಸಭೆ ನಡೆಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಮಾಡಿದರು.

ಬಿಜೆಪಿ: ‘ಬಿಜೆಪಿ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ದೇಶ ಪ್ರೇಮ ಹಾಗೂ ಅಭಿವೃದ್ಧಿಯೇ ಪಕ್ಷದ ಧ್ಯೇಯವಾಗಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಅವರು ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹೇಳಿದರು.

ADVERTISEMENT

‘ಖೂಬಾ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ರೈಲುಗಳ ಸಂಚಾರ ಆರಂಭವಾಗಿವೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ’ ಎಂದು ತಿಳಿಸಿದರು.

‘ನನ್ನ ಹಾಗೂ ಭಗವಂತ ಖೂಬಾ ಅವರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸುತ್ತೇವೆ’ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಪತ್ರಿಕಾಗೋಷ್ಠಿಯಲ್ಲಿ ಇದ್ದರೂ ‘ನಾಮಪತ್ರ ಸಲ್ಲಿಸುವ ದಿನ ಮಾಧ್ಯಮಗೋಷ್ಠಿ ನಡೆಲಾಗುವುದು’ ಎಂದಷ್ಟೇ ಹೇಳಿದರು.

ಔರಾದ್‌ ಶಾಸಕ ಪ್ರಭು ಚವಾಣ್, ಆಳಂದ ಶಾಸಕ ಸುಭಾಷ ಗುತ್ತೆದಾರ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ಸುಭಾಷ ಕಲ್ಲೂರ ಹಾಗೂ ಪಕ್ಷದ ಪದಾಧಿಕಾರಿಗಳು ಇದ್ದರು.

ಕಾಂಗ್ರೆಸ್:‘ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಈಶ್ವರ ಖಂಡ್ರೆ ಅವರಿಗೆ ದೊರಕಿದ್ದು ಕಾರ್ಯಕರ್ತರಲ್ಲಿ ಸಂತಸ ಮೂಡಿದೆ. ಚುನಾವಣೆಯಲ್ಲಿ ಖಂಡ್ರೆ ಅವರು ಎರಡು ಲಕ್ಷ ಮತಗಳಿಂದ ಚುನಾಯಿತರಾಗುವರು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿತ್ತು. ಪಕ್ಷದ ಶಾಸಕರ, ಪದಾಧಿಕಾರಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್‌ ಖಂಡ್ರೆ ಅವರಿಗೆ ಟಿಕೆಟ್‌ ನೀಡಿದೆ. ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ ಕಾರ್ಯಕರ್ತರ ಪಡೆಯೇ ನಮ್ಮೊಂದಿಗೆ ಇರುವ ಕಾರಣ ಗೆಲುವು ಕಷ್ಟವಲ್ಲ’ ಎಂದು ಹೇಳಿದರು.

‘ಅಲ್ಪಸಂಖ್ಯಾತರಿಗೆ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಬೇಸರ ಇರಬಹುದು. ಆದರೆ, ಎಲ್ಲರೂ ಪಕ್ಷದೊಂದಿಗೆ ಇದ್ದಾರೆ. ಚಿಂಚೋಳಿ ಶಾಸಕ ಕಾಂಗ್ರೆಸ್‌ಗೆ ವಿದಾಯ ಹೇಳಿದರೂ ಅಲ್ಲಿ ಕಾರ್ಯಕರ್ತರ ಪಡೆ ಇದೆ. ಆಳಂದದಲ್ಲಿ ಮತದಾರರನ್ನು ಸೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಪೆಟ್ರೋಲ್‌, ಡೀಸೆಲ್ ಬೆಲೆ ಹೆಚ್ಚಳ, ಅಧಿಕ ಮುಖ ಬೆಲೆಯ ಹಳೆಯ ನೋಟುಗಳ ರದ್ದತಿ, ನಿರುದ್ಯೋಗ ಸಮಸ್ಯೆ, ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಜಮಾ ಮಾಡುವ ಬಿಜೆಪಿಯವರ ಸುಳ್ಳು ಭರವಸೆಯಿಂದ ಜನ ಬೇಸತ್ತಿದ್ದಾರೆ. ಇದೆಲ್ಲ ನಮ್ಮ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ’ ಎಂದು ಹೇಳಿದರು.

ದತ್ತಾತ್ರಿ ಮೂಲಗೆ, ಸಲಿಂಮೊದ್ದಿನ್, ಶಂಕರ ದೊಡ್ಡಿ, ರೋಹಿದಾಸ ಘೋಡೆ, ಯುಸೂಫ್, ಶರಣಪ್ಪ ಬಲ್ಲೂರ್, ಸಂಜಯ ಜಾಗೀರದಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.