ADVERTISEMENT

ಬೀದರ್‌ನಲ್ಲಿ ಭಾಗಶಃ ಲಾಕ್‌ಡೌನ್‌ ಜಾರಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 10:23 IST
Last Updated 22 ಏಪ್ರಿಲ್ 2021, 10:23 IST
ಬೀದರ್‌ನ ಉದಗಿರ್ ರಸ್ತೆಯಲ್ಲಿರುವ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ
ಬೀದರ್‌ನ ಉದಗಿರ್ ರಸ್ತೆಯಲ್ಲಿರುವ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ   

ಬೀದರ್: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಲೇ ಇರುವ ಕಾರಣ ಮೇ 4ರ ವರೆಗೆ ಭಾಗಶಃ ಲಾಕ್‌ಡೌನ್‌ ಜಾರಿ ಮಾಡಲಾಗಿದೆ.

ಗುರುವಾರ ಪೊಲೀಸರು ಜಿಲ್ಲೆಯ ನಗರ ಪಟ್ಟಣ ಪ್ರದೇಶಗಳಲ್ಲಿ ದಿಡೀರ್‌ ಮಾರುಕಟ್ಟೆ ಪ್ರದೇಶಕ್ಕೆ ಬಂದು ಅಂಗಡಿಗಳನ್ನು ಬಂದ್‌ ಮಾಡಿಸಲು ಶುರು ಮಾಡಿದ್ದರಿಂದ ವ್ಯಾಪಾರಿಗಳು, ಸಾರ್ವಜನಿಕರು ಆತಂಕಕ್ಕೆ ಒಳಗಾದರು.
ಕೆಲವರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಆದೇಶದ ಅನ್ವಯ ರಾತ್ರಿ 9 ರಿಂದ ಬೆಳಿಗ್ಗೆ 6ರ ವರೆಗೆ ರಾತ್ರಿ ಕರ್ಫ್ಯೂ, ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೆ, ಸರ್ಕಾರದ ತುರ್ತು ಆದೇಶ ಬಂದ ನಂತರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪೊಲೀಸರು ವಾಹನಗಳಲ್ಲಿ ಬಂದು ಅಂಗಡಿಗಳನ್ನು ಬಂದ್‌ ಮಾಡಿಸಿದರು.

ADVERTISEMENT

ನಗರದ ಅಂಬೇಡ್ಕರ್ ವೃತ್ತ, ಗವಾನ್ ಚೌಕ್‌, ಮೋಹನ್‌ ಮಾರ್ಕೆಟ್, ಉದಗಿರ ರಸ್ತೆ ಹಾಗೂ ಗುಂಪಾ ರಸ್ತೆ, ಮೈಲೂರ್‌ ಕ್ರಾಸ್‌ನಲ್ಲಿರುವ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. ಕೆಲವು ಕಡೆ ಪೊಲೀಸರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದವೂ ನಡೆಯಿತು. ಆದರೆ, ಪೊಲೀಸರು ವ್ಯಾಪಾರಸ್ಥರಿಗೆ ಮನವರಿಕೆ ಮಾಡಿ ಅಂಗಡಿಗಳನ್ನು ಮುಚ್ಚಿಸಿದರು.

’ಸರ್ಕಾರ ಎರಡು ವಾರ ಭಾಗಶಃ ಲಾಕ್‌ಡೌನ್‌ಗೆ ಆದೇಶ ನೀಡಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಆಸ್ಪತ್ರೆಗಳು, ಮೆಡಿಕಲ್, ಕಿರಾಣಿ ಅಂಗಡಿಗಳು, ಬೇಕರಿ, ಉತ್ಪಾದನಾ ಕ್ಷೇತ್ರದ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.
‘ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಪಡೆಯಬಹುದು. ಆದರೆ ಒಳಗೆ ಕುಳಿತು ಆಹಾರ, ಉಪಾಹಾರ ಸೇವಿಸಲು ನಿರ್ಬಂಧ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.