ADVERTISEMENT

31ರ ವರೆಗೆ ಪಿಂಚಣಿ ವಿಶೇಷ ಅಭಿಯಾನ

ಸಾಮಾಜಿಕ ಭದ್ರತೆ, ಪಿಂಚಣಿ ಯೋಜನೆಗಳ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 16:54 IST
Last Updated 27 ಜನವರಿ 2021, 16:54 IST
ಬೀದರ್‌ನಲ್ಲಿ ಬುಧವಾರ ನಡೆದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಮಾತನಾಡಿದರು
ಬೀದರ್‌ನಲ್ಲಿ ಬುಧವಾರ ನಡೆದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಮಾತನಾಡಿದರು   

ಬೀದರ್: ‘ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಅಡಿ ಬಂದಿರುವ ಅರ್ಜಿಗಳ ವಿಲೇವಾರಿಗೆ ತ್ವರಿತ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ 31ರ ವರೆಗೆ ಪಿಂಚಣಿ ವಿಶೇಷ ಅಭಿಯಾನ ನಡೆಸಬೇಕು’ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರರೊಂದಿಗೆ
ವಿಡಿಯೊ ಸಂವಾದ ನಡೆಸಿ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆಗಳ ಅನುಷ್ಠಾನದ ಮಾಹಿತಿ ಪಡೆದು ಅವರು ಮಾತನಾಡಿದರು

‘ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಮನಸ್ವಿನಿ, ಅಂಗವಿಕಲ, ಅಂತ್ಯ ಸಂಸ್ಕಾರ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳಿಗೆ ನೆರವು ಕೋರಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಸಹಾಯಧನ ನೀಡುವ ಕಾರ್ಯ ವೇಗವಾಗಿ ನಡೆಯಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ತಹಶೀಲ್ದಾರರನ್ನೆ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಜನವರಿ 31ರ ವರೆಗೆ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ ಮಾಡಬೇಕು. ಬರುವ ಮೂರು ದಿನಗಳಲ್ಲಿ ಮೊದಲಾದ್ಯತೆ ಕೆಲಸವೆಂದು ಪರಿಗಣಿಸಿ ಪ್ರಗತಿ ತೋರಿಸಬೇಕು. ಅರ್ಜಿಗಳ ವಿಲೇವಾರಿ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ ಹಂತದಲ್ಲಿ ವಿಳಂಬವಾಗುತ್ತಿದ್ದರೆ ಅವರಿಗೆ ನೋಟಿಸ್ ಜಾರಿ ಮಾಡಬೇಕು’ ಎಂದು ಸೂಚಿಸಿದರು.

‘ರಾಜ್ಯ ಸರ್ಕಾರವು ಸಾಮಾಜಿಕ ಭದ್ರತೆ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದೆ. ಅರ್ಜಿಯೊಂದಿಗೆ ರೇಷನ್ ಕಾರ್ಡ್ ಇಲ್ಲ, ಆಧಾರ್ ಕಾರ್ಡ್‌ ಇಲ್ಲ ಎಂದು ಅರ್ಜಿದಾರರಿಗೆ ಅನಗತ್ಯ ಕಿರಿಕಿರಿ ನೀಡಿ ಅರ್ಹರ ಅರ್ಜಿಗಳನ್ನು ತಿರಸ್ಕರಿಸುವುದು ಕಂಡು ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಪ್ರತಿ ತಿಂಗಳು 2.14 ಲಕ್ಷ ಜನರಿಗೆ ₹ 19 ಕೋಟಿ ಮಾಸಾಶನ ಕೊಡಲಾಗುತ್ತಿದೆ. 20 ಲಕ್ಷ ಜನಸಂಖ್ಯೆಯಲ್ಲಿ 2 ಲಕ್ಷ ಜನರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ. ಅರ್ಹ ಪಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡುವ ಕಾರ್ಯ ಚುರುಕುಗೊಳ್ಳಬೇಕು. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನವೋದಯ ಮೊಬೈಲ್ ಆ್ಯಪ್‍ನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಮನೆಬಾಗಿಲಿಗೆ ಮಾಸಾಶನ ಸಂದೇಶ ಹೋಗಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಮೂರು ದಿನಗಳ ವಿಶೇಷ ಅಭಿಯಾನದಲ್ಲಿ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ನವೋದಯ ಆ್ಯಪ್ ಮೂಲಕ ಮನೆಬಾಗಿಲಲ್ಲೇ ಫಲಾನುಭವಿಗಳ ಭಾವಚಿತ್ರ ಹಾಗೂ ಮಾಹಿತಿ ಸಂಗ್ರಹಣೆ ನಡೆಯಬೇಕು’ ಎಂದು ತಿಳಿಸಿದರು.

‘ತಾಲ್ಲೂಕುವಾರು ಆಧಾರ್ ಸಂಖ್ಯೆ ಜೋಡಣೆ ಪ್ರಗತಿಯು ತೃಪ್ತಿದಾಯಕವಾಗಿಲ್ಲ. ಆಧಾರ್ ಸಂಖ್ಯೆ ಜೋಡಣೆ ಬಹಳ ಸರಳ ಪ್ರಕ್ರಿಯೆ. ಎಲ್ಲ ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯ ನಡೆಯಬೇಕು. ಮತದಾರರ ಪಟ್ಟಿಯನುಸಾರ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ , ಪಟ್ಟಣ ಪಂಚಾಯಿತಿ ಮತ್ತು ಬಿಎಲ್‍ಒಗಳ ಸಹಕಾರ ಪಡೆದು ಪ್ರದೇಶವಾರು ಕ್ರಮ ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

ಸಾಮಾಜಿಕ ಭದ್ರತೆ ಯೋಜನೆಗಳ ಸಹಾಯಕ ನಿರ್ದೇಶಕಿ ಪಾವಣಿ ಕುಲಕರ್ಣಿ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ್, ಬೀದರ್ ತಹಶೀಲ್ದಾರ್ ಗಂಗಾದೇವಿ ಸಿ.ಎಚ್.ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.