ADVERTISEMENT

ಮನೆಗೊಂದು ಮರ, ಊರಿಗೊಂದು ವನ ಇರಲಿ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 13:57 IST
Last Updated 7 ಜುಲೈ 2018, 13:57 IST
ಬೀದರ್‌ನ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಸಸಿ ನೆಟ್ಟರು. ಬಾಬು ಮಲ್ಕಾಪುರೆ, ಪ್ರಕಾಶ ಪಾಟೀಲ ಇದ್ದಾರೆ
ಬೀದರ್‌ನ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಸಸಿ ನೆಟ್ಟರು. ಬಾಬು ಮಲ್ಕಾಪುರೆ, ಪ್ರಕಾಶ ಪಾಟೀಲ ಇದ್ದಾರೆ   

ಬೀದರ್‌: ‘ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಯೊಬ್ಬರು ಮನೆಗೊಂದು ಮರ, ಊರಿಗೊಂದು ವನ ಇರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.

ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಸಿ ನೆಟ್ಟು ಅವರು ಮಾತನಾಡಿದರು.

‘ಗಿಡ ಮರಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಿಸರ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ಮುಂದೆ ಬರಬೇಕು. ಇಂದಿನ ಯುವಕರು ಮುಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ, ‘ಪ್ರತಿ ವರ್ಷ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ ಒಂದು ಸಸಿ ನೆಟ್ಟು ಶಿಕ್ಷಣ ಪೂರ್ಣಗೊಳಿಸುವ ವರೆಗೂ ಬೆಳೆಸಬೇಕು. ಈ ಮೂಲಕ ತಾನು ಅಧ್ಯಯನ ಮಾಡಿದ ಕಾಲೇಜಿನಲ್ಲಿ ಒಂದು ಗುರುತು ಬಿಟ್ಟುಹೋಗಬೇಕು’ ಎಂದರು.

‘ಶಿಕ್ಷಣ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ’ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ತೋಟಗಾರಿಕೆ ಮಹಾವಿದ್ಯಾಲಯದ ಉಪನ್ಯಾಸಕ ಪ್ರವೀಣಕುಮಾರ, ‘ಬೀದರ್‌ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತಮ ಹವಾಗುಣ ಇದೆ. ರೈತರು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ ಪಾಟೀಲ,
ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರಾವ್ ಮಲ್ಕಾಪುರೆ, ಬೀದರ್‌ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಾಮನಗಟ್ಟಿ, ಕರ್ನಾಟಕ ಫಾರ್ಮಸಿ ಕಾಲೇಜು ಪ್ರಾಚಾರ್ಯ ಕ್ರಾಂತಿಕುಮಾರ ಸಿರ್ಸೆ, ಕರ್ನಾಟಕ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ಸಂಯೋಜನಾ ಅಧಿಕಾರಿ ಸಚಿನ್‌ ವಿಶ್ವಕರ್ಮ ಇದ್ದರು.

ಪ್ರೊ. ಹಾವಗಿರಾವ್‌ ನಿರೂಪಿಸಿದರು. ಪ್ರೊ.ಎಸ್.ಬಿ. ಸಜ್ಜನಶೆಟ್ಟಿ ವಂದಿಸಿದರು. ಜಿಲ್ಲಾ ಪಂಚಾಯಿತಿ, ಬೀದರ್‌ ಸಾಮಾಜಿಕ ಅರಣ್ಯ ವಿಭಾಗ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕರ್ನಾಟಕ ಪದವಿ ಪೂರ್ವ ಕಾಲೇಜು, ಕರ್ನಾಟಕ ಫಾರ್ಮಸಿ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.