ADVERTISEMENT

ಕವನಗಳಲ್ಲಿ ನಲಿದಾಡಿದ ಭಾವನೆಗಳು

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

ಚಂದ್ರಕಾಂತ ಮಸಾನಿ
Published 6 ಫೆಬ್ರುವರಿ 2019, 14:42 IST
Last Updated 6 ಫೆಬ್ರುವರಿ 2019, 14:42 IST
ಬೀದರ್‌ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ವಜ್ರಾ ಪಾಟೀಲ ಕವನ ವಾಚಿಸಿದರು
ಬೀದರ್‌ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ವಜ್ರಾ ಪಾಟೀಲ ಕವನ ವಾಚಿಸಿದರು   

ಬೀದರ್: ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕವಯತ್ರಿಯರು ವಾಚಿಸಿದ ಕವನಗಳಲ್ಲಿ ಕನ್ನಡದ ಪ್ರೀತಿ, ಮಹಿಳೆಯ ನೋವು ಹಾಗೂ ಸೌಂದರ್ಯ ನಲಿದಾಡಿಸಿದರು.

ಬಹುತೇಕ ಕವಯತ್ರಿಯರು ಪ್ರಸ್ತುತ ಸಮಾಜದ ಆಗು ಹೋಗುಗಳನ್ನೇ ತಮ್ಮ ಕವನಗಳ ವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದು ಕವಿಗೋಷ್ಠಿಯ ವಿಶೇಷವಾಗಿತ್ತು. ಹೆಚ್ಚಿನವರು ಸಮಾನತೆ, ಸ್ವಾತಂತ್ರ್ಯ, ಮಹಿಳಾ ಅಸ್ಮಿತೆಯನ್ನು ಪ್ರಸ್ತಾಪಿಸಿದರು. ಒಬ್ಬರು ಅಪ್ಸರೆಯೂ ಅಸೂಯೆ ಪಡುವಂತೆ ಗೆಳತಿಯ ಸೌಂದರ್ಯ ಬಣ್ಣಿಸಿದರು.

ಎಲ್ಲರಿಗೂ ಹಳೆಯ ವಿಷಯಗಳೇ ಕವನದ ವಸ್ತುವಾಗಿದ್ದವು. ಕವನಗಳಲ್ಲಿ ಹೊಸತನ ಕಂಡು ಬರಲಿಲ್ಲ.

ADVERTISEMENT

‘ಒಮ್ಮೆಯಾದರೂ ಇಣುಕಿ ನೋಡು ನಾನಿಲ್ಲದಿರೆ ನೀ ಅಪೂರ್ಣವೆಂದು ಅಸ್ತಿತ್ವ ಶಿವನೆಂದು’ ಎಂದು ಕವಯತ್ರಿ ರಜಿಯಾ ಬಳಬಟ್ಟಿ ಅವರು ಮಹಿಳೆ ಅಸ್ತಿತ್ವ, ಸಾಮರ್ಥ್ಯ ಹಾಗೂ ಸಮಾನತೆಯನ್ನು ಕವನದಲ್ಲಿ ಪ್ರತಿಪಾದಿಸಿದರು.

ಸಾಧನಾ ರಂಜೋಳಕರ್‌ ಅವರು ‘ಕನ್ಯೆ ಕೇಳಿಲ್ಲಿ’ ಶೀರ್ಷಿಕೆಯಡಿ ಕಲ್ಪನಾ ಕುದುರೆ ಏರಿ ಕನಸುಗಳ ಬುತ್ತಿ ಹಿಡಿದು ಕನ್ಯೆ ಹೊರಟಿರುವೆ ಎಲ್ಲಿಗೆ? ಕಡಿವಾಣವಿರಲಿ ಕಲ್ಲು ಮುಳ್ಳುಗಳ ಕಾಡುದಾರಿ ಕ್ರೂರ ಮೃಗಗಳ ದಾಳಿ ಕಾಮುಕ ಕಂದಕಗಳು... ಎನ್ನುವ ಕವನದ ಮೂಲಕ ಆಧುನಿಕ ಸಮಾಜದಲ್ಲಿ ಮಹಿಳೆ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಸಂದರ್ಭದಲ್ಲಿ ಎದುರಿಸುತ್ತಿರುವ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿದರು.

ನಮ್ಮ ಪ್ರೀತಿಯ ಕನ್ನಡ ನಾಡು ಸಾಹಿತ್ಯ ಚಿಲುಮೆಯ ಸುಮಧುರ ಬೀಡು ಕನ್ನಡ ಕನ್ನಡ ತೊದಲುತ ನಾವು ನಿತ್ಯ ನೂತನ ಬರೆಯುವೇವು ಎಂದು ಭಾಲ್ಕಿಯ ಕೃಷ್ಣಾಬಾಯಿ ಪವಾರ ಅವರು ಸಂದರ್ಭೋಚಿತವಾದ ಕವನ ವಾಚಿಸಿದರು. ನಾಡು, ನುಡಿ, ಸಂತರ, ಶರಣರ ಅನುಭವ ಪ್ರಸ್ತಾಪಿಸಿದರು. ಕನ್ನಡವೊಂದೇ ಇರಲಿ ನಮ್ಮ ಸಂಗಡ ಎಂದು ಕನ್ನಡದ ಬಗೆಗೆ ಆಭಿಮಾನ ಮೆರೆದರು.

ನಿನಗೊಂದು ಪ್ರಶ್ನೆಯನು ಕೇಳಿಬಿಡುವೆನು ಗೆಳತಿ ಬಹುಕಾಲದಿಂದ ಮನವ ಕಾಡುತಿಹುದೀ ಪ್ರಶ್ನೆ ಹೃದಯದಾಳದೊಳಗೆ ಇಳಿದು ನೀ ಉತ್ತರಿಸು ನಿನ್ನ ಕಾಯದ ಆ ಚೆಲುವ ಹೊಂಬಣ್ಣವನು ಉದಯರವಿಗೇಕೆ ನೀ ಸಾಲ ಕೊಟ್ಟೆ? ಸಂಜೆ ಗೆಂಪಿನ ಭಾನು ನಿನ್ನ ಕೆನ್ನೆಯ ಕೆಂಪು ಕಾಡು ಮತ್ಸರದಿಂದ ಕದ್ದೊಯ್ದನೆ? ಎಂದು ಗೀತಾಂಜಲಿ ಪಾಟೀಲ ಅವರು ಅಪ್ಸರೆಯೇ ಹೊಟ್ಟೆಕಿಚ್ಚು ಪಡುವಂತೆ ತನ್ನ ಗೆಳತಿಯ ಸೌಂದರ್ಯವನ್ನು ಬಣ್ಣಿಸಿದ್ದು ಪ್ರೇಕ್ಷಕರಿಗೆ ಮುದ ನೀಡಿತು. ಹೆಣ್ಣೆಂದರೇ ಸೌಂದರ್ಯ ಎನ್ನುವ ಭಾವ ಅರಳಿತು.

ಹುಮನಾಬಾದ್‌ನ ಶೋಭಾ ಔರಾದೆ ಅವರು ‘ನನ್ನ ಗಂಡನ ಕೈಗೊಂಬೆ ನಾನು’ ಶೀರ್ಷಿಕೆಯ ಕವನ ವಾಚಿಸಿ ಸಾಮಾಜಿಕ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ಸ್ಥಿತಿಗತಿಯನ್ನು ಬಿಂಬಿಸಲು ಪ್ರಯತ್ನಿಸಿದರು.

ಚೆನ್ನಮ್ಮ ವೆಲ್ಲೇಪುರ, ಸೀಮಾ ಪಾಟೀಲ, ಹುಮನಾಬಾದ್‌ನ ಕರುಣಾ ಸಲಗರೆ, ಕೀರ್ತಿಲತಾ ಬಿರಾದಾರ, ಸಿದ್ದಮ್ಮ ಬಸಣ್ಣೋರ್
ಬಸವೇಶ್ವರಿ ದೇಗಲೂರೆ, ಸುನೀತಾ ಬಿರಾದಾರ, ರೇಣುಕಾ ಮಠ, ವಿದ್ಯಾವತಿ ಹಿರೇಮಠ, ಡಾ.ಜಗದೇವಿ ತಿಬಶೆಟ್ಟಿ, ಕವನ ವಾಚನ ಮಾಡಿದರು.

ಸಣ್ಣ ಸಭಾಂಗಣದಲ್ಲಿ ಸ್ಥಳಾವಕಾಶ ದೊರೆಯದೆ ಅನೇಕ ಜನ ಮುಖ್ಯದ್ವಾರದ ಬಳಿ ನಿಂತು ಮೂಲಕ ಹನಿಗವನಗಳ ಹನಿ ಹೀರಿದರು. ಸಾಹಿತಿ ಡಾ.ವಜ್ರಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಪಾಟೀಲ ಸ್ವಾಗತಿಸಿದರು. ರಾಜಮ್ಮ ಚಿಕ್ಕಪೇಟೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.