ಭಗವಂತ ಖೂಬಾ
ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧ ಸಮಾಜದ ಮುಖಂಡರು, ಸಂಘಟನೆಗಳ ಪ್ರಮುಖರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಜಿಲ್ಲೆಯಿಂದ ಗಡಿಪಾರು ಮಾಡಲು ಷಡ್ಯಂತ್ರ ನಡೆಸಿ, ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದನ್ನು ಕೂಡಲೇ ತಡೆಯಬೇಕು’ ಎಂದು ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಅವರು ಈ ಸಂಬಂಧ ರಾಜ್ಯಪಾಲ ಥಾವರಚಂದ ಗೆಹ್ಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ದೇಶದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ದೇಶದ ಜನತೆ ಅನುಭವಿಸಿದ ನೋವು, ಭಯದ ವಾತಾವರಣ ಇಂದು ಬೀದರ್ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅಂಧಾ ಕಾನೂನು ನಡೆಯುತ್ತಿದೆ. ಹಾಡುಹಗಲೆ ಕೊಲೆ, ಸುಲಿಗೆ ಮತ್ತು ರಾಜಾರೋಷವಾಗಿ ಇಸ್ಪೀಟ್, ಮಟಕಾ ದಂಧೆ, ಕ್ಲಬ್ ಧಂಧೆ, ಬಯೋ ಡೀಸೆಲ್ ಮಾರಾಟ, ಅಕ್ಕಿ ಕಳ್ಳಸಾಗಾಟ ಮಾಡುತ್ತಿದ್ದು, ಅಂತಹವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಇವುಗಳ ವಿರುದ್ಧ ಧ್ವನಿ ಎತ್ತಿದ್ದರೆ, ಪ್ರತಿಭಟಿಸಿದರೆ ಅವರ ವಿರುದ್ಧ 100 ದಿನದೊಳಗೆ ಹತ್ತಾರು ಸುಳ್ಳು ಪ್ರಕರಣಗಳು ಹಾಕುವುದು, ಹಳೆಯ ಪ್ರಕರಣಗಳನ್ನು ಕೆದಕುವುದು, ಸ್ಥಳೀಯ ಪೋಲಿಸರಿಂದ ಕರೆ ಮಾಡಿಸಿ ಕಿರಿಕಿರಿ ಕೊಡುವುದು ಮಾಡಿಸುತ್ತಿದ್ದಾರೆ. ಮಧ್ಯರಾತ್ರಿ ಪೋಲಿಸ್ ಸ್ಟೇಶನ್‌ಗೆ ಕರೆಸಿಕೊಳ್ಳಲಾಗುತ್ತಿದೆ. ಇಲ್ಲವಾದಲ್ಲಿ ಏಕಾಏಕಿ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಹೆದರದೆ ಇದ್ದಲ್ಲಿ ಈಶ್ವರ ಖಂಡ್ರೆಯವರ ಒತ್ತಡಕ್ಕೆ ಮಣಿದು, ಅಧಿಕಾರಿಗಳು ಸುಳ್ಳು ವರದಿ ಸೃಷ್ಟಿಸಿ, ಜನರಿಗೆ ಗಡಿಪಾರು ನೋಟಿಸ್ ಕೊಡುತ್ತಿದ್ದಾರೆ. ಈ ಗಡಿಪಾರು ಪ್ರಕರಣಗಳಲ್ಲಿ ಕೆಲವರು ಈ ಹಿಂದೆ ಈಶ್ವರ ಖಂಡ್ರೆಯವರ ಆಪ್ತರು ಸೇರಿದ್ದಾರೆ. ಆದರೆ, ಈಗ ಅವರೊಂದಿಗೆ ಹೊಂದಾಣಿಕೆ ಆಗದೆ ಕಾರಣ ದ್ವೇಷ ಸಾಧಿಸುತ್ತಿದ್ದಾರೆ. ಗಡಿಪಾರು ನೋಟಿಸ್ ಪಡೆದ ಅನೇಕ ವ್ಯಕ್ತಿಗಳು ನನ್ನ ಮುಂದೆ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳ್ಳತನಗಳು ನಡೆದಾಗ ಮಾಧ್ಯಮದವರಿಗೆ ಸುದ್ದಿ ಮಾಡಲು ಬಿಡುತ್ತಿಲ್ಲ. ಶೂಟೌಟ್ ಆಗಿ 90 ಲಕ್ಷ ದರೋಡೆ ಮಾಡಲಾಗಿದೆ. ಇದುವರೆಗೆ ದರೋಡೆಕೋರರ ಪತ್ತೆ ಮಾಡಿಲ್ಲ. ಆದರೆ, ಪೋಲೀಸ್ ಇಲಾಖೆಯು ಉಸ್ತುವಾರಿ ಮಂತ್ರಿಗಳ ಕೈಗೊಂಬೆಯಾಗಿ, ಅವರು ಹೇಳಿದ ವ್ಯಕ್ತಿಗಳ ಮೇಲೆ ಗಡಿಪಾರು ಮಾಡಲು ಎಲ್ಲ ಸಿದ್ದತೆ ತರಾತುರಿಯಲ್ಲಿ ಮಾಡುತ್ತಿದೆ. ಇದರಿಂದ ಹೋರಾಟಗಾರರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಆಗದೆ ಇರುವ ಹಾಗೆ ಆಗುತ್ತಿದೆ. ಅವರ ಧ್ವನಿ ಕುಗ್ಗಿಸುವ ಪ್ರಯತ್ನವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಚಿವ ಖಂಡ್ರೆಯವರ ದ್ವೇಷದ ರಾಜಕಾರಣವನ್ನು ತಡೆಯಬೇಕು. ಗಡಿಪಾರು ನೋಟಿಸ್ ಕೊಟ್ಟವರ ಬಗ್ಗೆ ಮತ್ತು ಸುಳ್ಳು ಪ್ರಕರಣಗಳಲ್ಲಿ ಸಿಲುಕಿದವರ ಬಗ್ಗೆ ಮತ್ತೊಮ್ಮೆ ಪರಿಶೀಲಿಸಬೇಕು. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.