ADVERTISEMENT

ಪಶುಸಂಗೋಪನೆ ಇಲಾಖೆ ಬಗ್ಗೆ ಏನೂ ಗೊತ್ತಿಲ್ಲದ ಸಚಿವರನ್ನು ಬದಲಿಸಿ: ಪ್ರಭು ಚವಾಣ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 13:35 IST
Last Updated 5 ಫೆಬ್ರುವರಿ 2024, 13:35 IST
   

ಬೀದರ್‌: ‘ರಾಜ್ಯದಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ. ಅವುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಆದರೆ, ಸರ್ಕಾರವಾಗಲಿ, ಪೊಲೀಸರಾಗಲಿ ಅದನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಪಶು ಸಂಗೋಪನೆ ಇಲಾಖೆಯ ಬಗ್ಗೆ ಸಚಿವ ವೆಂಕಟೇಶ್‌ ಅವರಿಗೆ ಏನೂ ಗೊತ್ತಿಲ್ಲ. ಕೂಡಲೇ ಅವರನ್ನು ಬದಲಿಸಬೇಕು’ ಎಂದು ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಒತ್ತಾಯಿಸಿದರು.

ಪಶು ಸಂಗೋಪನಾ ಸಚಿವ ವೆಂಕಟೇಶ್‌ ಅವರು ಇದುವರೆಗೆ ವಿಭಾಗ, ಜಿಲ್ಲೆಗಳಲ್ಲಿ ಸಭೆ ನಡೆಸಿಲ್ಲ. ಯಾವುದೇ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಇಲಾಖೆಯ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಮುಖ್ಯಮಂತ್ರಿಯವರು ತಕ್ಷಣವೇ ಅವರನ್ನು ಬದಲಿಸಬೇಕು ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಜಾನುವಾರು ಹತ್ಯೆ ಮತ್ತು ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ಅನೇಕ ಕ್ರಮಗಳನ್ನು ಜರುಗಿಸಲಾಗಿತ್ತು. ಚೆಕ್‌ಪೋಸ್ಟ್‌ಗಳನ್ನು ತೆರೆದು, ಗೋವುಗಳನ್ನು ಕಸಾಯಿಖಾನೆಗಳಿಗೆ ಸಾಗಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಈಗ ಆ ಕೆಲಸ ಆಗುತ್ತಿಲ್ಲ. ಜಾನುವಾರುಗಳ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವೆ. ಈ ಬಗ್ಗೆ ಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುವೆ. ಇಲ್ಲವಾದರೆ ಜಾನುವಾರುಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ನಮ್ಮ ಸರ್ಕಾರವಿದ್ದಾಗ ನಾನು ಪಶು ಸಂಗೋಪನಾ ಸಚಿವನಾಗಿ ಗೋವುಗಳ ಹತ್ಯೆಗೆ ಕಾನೂನು ಜಾರಿಗೆ ತಂದಿದ್ದೆವು. ಗೋಮಾಳ ಜಮೀನಿನಲ್ಲಿ ಗೋಶಾಲೆ ಆರಂಭಿಸಲು ಅವಕಾಶ ಕಲ್ಪಿಸಿದ್ದೆ. ರಾಜ್ಯದಲ್ಲಿ 70 ಗೋಶಾಲೆಗಳ ಪೈಕಿ 52ಕ್ಕೆ ಜಾಗ ಗುರುತಿಸಲಾಗಿತ್ತು. 28 ಗೋಶಾಲೆ ಮಂಜೂರು ಮಾಡಿಸಿದ್ದೆ. 15ಕ್ಕೆ ಚಾಲನೆ ಕೊಟ್ಟಿದ್ದೆವು. ಪ್ರಾಣಿ ಕಲ್ಯಾಣ ಮಂಡಳಿ, ಪುಣ್ಯಕೋಟಿ ದತ್ತು ಯೋಜನೆ ಆರಂಭಿಸಿ ₹27 ಕೋಟಿ ಅನುದಾನ ಕೊಟ್ಟಿದ್ದೆ. ಜಾನುವಾರುಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್‌ ಸೇವೆ ಆರಂಭಿಸಿದ್ದೆವು. ಈಗ ಅವುಗಳನ್ನೆಲ್ಲ ಬಂದ್‌ ಮಾಡಿದ್ದಾರೆ. ಮೂಕ ಪ್ರಾಣಿಗಳ ಮೇಲೆ ಕಾಂಗ್ರೆಸ್‌ ಸರ್ಕಾರಕ್ಕೆ ಸಿಟ್ಟೇಕೆ ಎಂದು ಪ್ರಶ್ನಿಸಿದರು.

ಗೋವುಗಳ ಸಾಕಣೆ ಮಾಡುವವರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರೋತ್ಸಾಹ ಧನ ಕೊಡುತ್ತಿದ್ದೆವು. ಈಗ ಅದನ್ನು ಕೊಡುತ್ತಿಲ್ಲ. ಶೀಘ್ರ ಪ್ರೋತ್ಸಾಹ ಧನ ಕೊಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆಗಳನ್ನು ಆರಂಭಿಸಬೆಕು. ಕಸಾಯಿಖಾನೆಗಳನ್ನು ಬಂದ್‌ ಮಾಡಿಸಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಶರಣು ಸಲಗರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವಸಂತ ಬಿರಾದಾರ, ಮುಖಂಡರಾದ ಅಶೋಕ ಹೊಕ್ರಾಣಿ, ವಿಜಯಕುಮಾರ ಪಾಟೀಲ ಗಾದಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.