ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕಿ: ಕನ್ನಡ ಶಾಲೆ ನಡೆಸುವ ಗಡಿನಾಡ ನಾಗವೇಣಿ ಶಂಕರ್

ಚಂದ್ರಕಾಂತ ಮಸಾನಿ
Published 1 ಜನವರಿ 2022, 7:33 IST
Last Updated 1 ಜನವರಿ 2022, 7:33 IST
ನಾಗವೇಣಿ ಶಂಕರ್
ನಾಗವೇಣಿ ಶಂಕರ್   

ಬೀದರ್: ಖಾನಾವಳಿಯಲ್ಲಿ ರೊಟ್ಟಿ ಮಾಡಿ ಜೀವನ ನಿರ್ವಹಿಸುತ್ತಿರುವ ಬೀದರ್ ತಾಲ್ಲೂಕಿನ ಕೊಳಾರ (ಕೆ) ಗ್ರಾಮದ ನಾಗವೇಣಿ ಶಂಕರ್ ತಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ; ಎರಡು ಶಾಲೆಗಳಿಗೆ ಪೋಷಕರಾಗಿದ್ದಾರೆ.

ಕೊಳಾರ(ಕೆ) ಗ್ರಾಮದ ಬಸವ ಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಘಾಳೆಪ್ಪ ಕೋಟೆ ಪ್ರೌಢಶಾಲೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದವು.ಈ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಾಗವೇಣಿ ಅವರ ಪತಿ ಶಂಕರ ಅವರೂ ಇದ್ದರು. ಆರ್ಥಿಕ ಸಮಸ್ಯೆಯಿಂದ ಒಬ್ಬೊಬ್ಬರೇ ಶಿಕ್ಷಕರು ಕೆಲಸ ಬಿಟ್ಟು ಹೋಗುತ್ತಿದ್ದರು. ಶಾಲೆಗೆ ಸ್ವಂತ ಕಟ್ಟಡ ಸಹ ಇರಲಿಲ್ಲ.

ಗ್ರಾಮದ ಶಿಕ್ಷಣ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ನಾಗವೇಣಿ ಅವರು ಖಾನಾವಳಿಯಿಂದ ಬರುತ್ತಿದ್ದ ಆದಾಯದ ಬಹುಭಾಗವನ್ನು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೆ ವೇತನವಾಗಿ ನೀಡಿ ಶಾಲೆಗಳನ್ನು ಉಳಿಸಿದರು. ಸಂಸ್ಥೆಯವರು ಶಾಲೆಯನ್ನು ನಾಗವೇಣಿ ನಾಗವೇಣಿ ಅವರ ಸುಪರ್ದಿಗೆ ಒಪ್ಪಿಸಿದ್ದಾರೆ. ಈಗ ಇಲ್ಲಿ ತಾಲ್ಲೂಕಿನ ಮೂರು ಗ್ರಾಮಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ADVERTISEMENT

ಕೊಳಾರ(ಕೆ)ದಲ್ಲಿ ಪ್ರಾಥಮಿಕ ಹಾಗೂ ನಿಜಾಮಪುರದಲ್ಲಿ ಪ್ರೌಢಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಇದೀಗ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಆದರೂ ರೊಟ್ಟಿ ಬಡಿಯುವ ಕಾಯಕ ನಿಲ್ಲಿಸಿಲ್ಲ. ಒತ್ತಡ ಬದುಕಿನಲ್ಲೂ ಭಾನುವಾರ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಕಾಳಜಿಯನ್ನೂ ತೋರುತ್ತಿದ್ದಾರೆ.

ನಾಗವೇಣಿ ಯಾರು?
ನಾಗವೇಣಿ ಮೂಲತಃ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಉದಗಿರಿಯವರು. ಬಡತನದಲ್ಲಿ ಬೆಳೆದ, ನಾಗವೇಣಿ ಶಾಲೆಯ ಮೆಟ್ಟಿಲು ಏರಲಿಲ್ಲ. ಕೊಳಾರದ ಶಂಕರ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಡಲಾಯಿತು. ಪತಿ ಶಂಕರ ರಾತ್ರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಹಗಲು ಕಾಲೇಜಿಗೆ ಹೋಗುತ್ತಿದ್ದರು. ಕುಟುಂಬ ನಿರ್ವಹಣೆಗೆ ವೇತನ ಸಾಲುತ್ತಿರಲಿಲ್ಲ. ನಾಗವೇಣಿ ಕೊಳಾರದಿಂದ ಬೀದರ್‌ಗೆ ಬಂದು ರೊಟ್ಟಿ ಬಡಿಯುವ ಕೆಲಸ ಶುರು ಮಾಡಿದರು. ದಿನಕ್ಕೆ ₹300 ಸಂಪಾದಿಸಿ ಪತಿಯ ಶಿಕ್ಷಣಕ್ಕೆ ನೆರವಾದರು.

ನಂತರ ಪತಿಯಿಂದ ಅಕ್ಷರ ಜ್ಞಾನ ಪಡೆದು, ಅಫಿಡವಿಟ್ ಸಲ್ಲಿಸಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದರು. ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರದ ನೆರವಿನಿಂದ ಆಹಾರ ಸಂಸ್ಕರಣಾ ತರಬೇತಿಯನ್ನೂ ಪಡೆದರು. ಮೊದಲು ಬೇರೆಯವರ ಖಾನಾವಳಿಯಲ್ಲಿ ರೊಟ್ಟಿ ಮಾಡಿದರು. ನಂತರ ಮನೆಯಲ್ಲೇ ರೊಟ್ಟಿ ಮಾಡಿ ಕೊಳಾರ ಕೈಗಾರಿಕೆ ಪ್ರದೇಶದ ಕಾರ್ಮಿಕರಿಗೆ ಪೂರೈಸಿದರು.

ಎಂಟು ವರ್ಷಗಳ ಹಿಂದೆ ನಗರದಲ್ಲಿ ಚಿಕ್ಕದಾದ ಜಾಗದಲ್ಲಿ ‘ಊಟದ ಮನೆ’ ಹೆಸರಲ್ಲಿ ಖಾನಾವಳಿ ಶುರು ಮಾಡಿದರು. ಗುಣಮಟ್ಟದ ಆಹಾರ ಸಿದ್ಧಪಡಿಸುವ ಕಾರಣ ಗ್ರಾಹಕರು ಆಸಕ್ತಿಯಿಂದ ಖಾನಾವಾಳಿಗೆ ಬಂದರು. ಖಾನಾವಾಳಿ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ಬರುವ ಆದಾಯವನ್ನು ಕನ್ನಡ ಶಾಲೆಗಳ ಸುಧಾರಣೆಗೆ ಬಳಸುತ್ತಿದ್ದಾರೆ. ನಾಗವೇಣಿ ಅವರು ತಮಗಾಗಿ ಯಾವ ಸಂಪತ್ತನ್ನೂ ಮಾಡಿಕೊಂಡಿಲ್ಲ. ಅವರ ಬದುಕು ಮಾದರಿಯಾಗಿದೆ.

ಮಗ ಎಂಜಿನಿಯರ್‌: ನಾಗವೇಣಿಯ ಮಗ ಬಿಇ ಮೆಕಾನಿಕಲ್‌ ಪದವಿ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಹಿರಿಯ ಮಗಳು ಬೀದರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಕಿರಿಯ ಮಗಳು ಪಿಯುಸಿ ಮುಗಿಸಿದ್ದಾಳೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ ಶ್ರೇಯಸ್ಸು ನಾಗವೇಣಿ ಅವರಿಗೆ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.