ADVERTISEMENT

ಬೀದರ್: ವಾರ ಕಳೆದರೂ ಮಕ್ಕಳಿಗಿಲ್ಲ ಬಿಸಿನೀರು!

ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ; ಹಲವು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 5:47 IST
Last Updated 30 ಜೂನ್ 2025, 5:47 IST
ಹುಲಸೂರ ಸಮೀಪದ ಮೆಹಕರ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ 
ಹುಲಸೂರ ಸಮೀಪದ ಮೆಹಕರ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ    

ಹುಲಸೂರ: ‘ಸಮೀಪದ ಮೆಹಕರ್‌ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಗರದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕಾಗಿ ವಸತಿ ಸೌಕರ್ಯ ಕಲ್ಪಿಸಿವುದ ಉದ್ದೇಶದಿಂದ ವಸತಿ ನಿಲಯ ಆರಂಭಿಸಲಾಗಿದೆ. ಆದರೆ ಫ್ಯಾನು ಹಾಳಾಗಿದ್ದರಿಂದ ರಾತ್ರಿ ಸೊಳ್ಳೆಗಳ ಕಾಟ ಜಾಸ್ತಿ ಇದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಮುಖ್ಯ ರಸ್ತೆಯಿಂದ ಹಾಸ್ಟೇಲ್‌ಗೆ ಬರಲು ಮಣ್ಣಿನ ದಾರಿಯಿದ್ದು ಈ ದಾರಿಯಲ್ಲಿ ಮಳೆಗಾಲದಲ್ಲಿ ಸಂಚರಿಸುವುದು ಕಷ್ಟ. ಹೀಗೆ ಹಲವು ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ.

ಸುತ್ತಮುತ್ತಲಿನ ಮಾನಿಕೇಶ್ವರ್, ವಾಂಜರಖೇಡ ತಾಂಡಾ, ಮೆಹಕರ ತಾಂಡಾ, ಗುಂಜರಗಾ, ಚಂದನಕೇರ ಸೇರಿ ಗ್ರಾಮೀಣ ಭಾಗದ ಹಿಂದುಳಿದ ವರ್ಗದ 5 ರಿಂದ 10ನೇ ತರಗತಿವರೆಗೆ ಅಭ್ಯಾಸ ಮಾಡುತ್ತಿರುವ ಸುಮಾರು 50 ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದು, ಮಳೆ ಬಂದರೆ ವಸತಿ ನಿಲಯದ 4 ಕೋಣೆಗಳು ಸೋರುತ್ತಿವೆ. ಮೂಲಸೌಲಭ್ಯಗಳ ಕೊರತೆ ಬಗ್ಗೆ ವಾರ್ಡನ್ ಗಮನಕ್ಕೆ ತರಬೇಕೆಂದರೆ ವಾರ್ಡನ್ ವಸತಿ ನಿಲಯಕ್ಕೆ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.

ADVERTISEMENT

ವಸತಿ ನಿಲಯದಲ್ಲಿ ಮಕ್ಕಳ ಭದ್ರತೆಗೆ, ಅಪರಿಚಿತರ ಚಲನವಲನ ಗಮನಿಸಲು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಿಟಕಿಗೆ ಜೋಡಿಸಿದ್ದ ಸೊಳ್ಳೆ ಪರದೆ ಹರಿದಿದೆ. ವಿದ್ಯಾರ್ಥಿಗಳ ವಸ್ತುಗಳನ್ನು ಇಟ್ಟುಕೊಳ್ಳುವ ಟ್ರಂಕ್‌ಗಳನ್ನು ಅನುಪಯುಕ್ತ ವಸ್ತುಗಳನ್ನು ಇಡಲು ಬಳಸಲಾಗುತ್ತಿದೆ. ಕೆಲವೊಂದಕ್ಕೆ ಬೀಗ ಹಾಕುವ ವ್ಯವಸ್ಥೆಯೇ ಇಲ್ಲ. ವಿದ್ಯಾರ್ಥಿಗಳು ಬಳಸುವ ಬೆಡ್ ಮತ್ತು ಚಾದರ್‌ ಹಳೆಯದಾಗಿದ್ದು ಗಲೀಜಾಗಿವೆ. ವಿದ್ಯಾರ್ಥಿಗಳ ಕೊಠಡಿಯಲ್ಲಿ ತ್ಯಾಜ್ಯ ಸಂಗ್ರಹದ ಡಬ್ಬಿಗಳಿಲ್ಲ. ಪುಸ್ತಕ, ಬ್ಯಾಗ್ ಇಡಲು ರ‍್ಯಾಕ್ ವ್ಯವಸ್ಥೆಯಿಲ್ಲ. ಕುರ್ಚಿ, ಟೇಬಲ್‌ಗಳಂತೂ ಇಲ್ಲಿ ಕಾಣುವುದಿಲ್ಲ.

ಸವಲತ್ತು ವಂಚಿತ: ಇಲಾಖೆ ನೀಡುವ ಸೌಲಭ್ಯಗಳಿಂದ ವಂಚಿತವಾಗಿರುವ ಇಲ್ಲಿನ ವಿದ್ಯಾರ್ಥಿಗಳು ಹಲವು ಸಂಕಷ್ಟಗಳ ನಡುವೆ ದಿನ ದೂಡುತ್ತಿದ್ದಾರೆ. ಇಲ್ಲಿ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಊಟದಲ್ಲಿ ತರಕಾರಿ ಬಳಕೆ ಮಾಡುತ್ತಿಲ್ಲ. ಬುಧವಾರ ಮಕ್ಕಳಿಗೆ ಊಟಕ್ಕೆ ಚಿಕನ್ ಹಾಗೂ ಚಹಾ/ ಬಿಸ್ಕೆಟ್ ನೀಡಲಾಗುವುದು ಎಂದು ಮೆನುಚಾರ್ಟಲ್ಲಿ ಮಾಹಿತಿ ಇದ್ದರೂ ಊಟಕ್ಕೆ ಅದನ್ನು ನೀಡಲಾಗುತ್ತಿಲ್ಲ. ಕಳಪೆ ಊಟ ಕೊಡುತ್ತಾರೆ. ಹೊಟ್ಟೆ ತುಂಬುವುದಿಲ್ಲ ರುಚಿ ಕೇಳುವಂತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅವ್ಯವಸ್ಥೆ: ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಸ್ನಾನದ ಕೋಣೆಗಳ ಕೊರತೆ, ಶುಚಿಯಾದ, ರುಚಿಯಾದ ಅಡುಗೆ, ಅಗತ್ಯ ಮೂಲ ಸೌಕರ್ಯಗಳ ಸಮಸ್ಯೆ ಇಲ್ಲಿ ರಾರಾಜಿಸುತ್ತಿವೆ. ಈ ಕುರಿತು ವಸತಿ ನಿಲಯದ ಮೇಲ್ವಿಚಾರಕನ ಗಮನಕ್ಕೆ ತಂದರೆ ಇದ್ದುದರಲ್ಲೇ ಅನುಸರಿಸಿಕೊಂಡು ಹೋಗಿ ಎಂದು ಗದಿರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೇಲ್ವಿಚಾರಕರು ವಿದ್ಯಾರ್ಥಿಗಳ ಜೊತೆಗೂಡಿ ಶ್ರಮ ವಹಿಸಿದರೆ ಕೈತೋಟ, ಉದ್ಯಾನ ನಿರ್ಮಿಸಲು ಸಾಧ್ಯ. ವಿವಿಧ ಜಾತಿಯ ಸಸಿಗಳನ್ನು ನೆಡಲು ಸ್ಥಳಾವಕಾಶ ಇದೆ. ವಸತಿ ನಿಲಯಗಳಿಗೆ ಮೇಲ್ವಿಚಾರಕರು ಸರಿಯಾಗಿ ಆಗಮಿಸುವುದಿಲ್ಲ ಎಂಬ ಆರೋಪವೂ ಇದೆ. ‘ಪ್ರಜಾವಾಣಿ’ ಪ್ರತಿನಿಧಿಗಳು ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಮಕ್ಕಳು ಸೌಲಭ್ಯ ವಂಚಿತವಾಗಿರುವ ಬಗ್ಗೆ ದೂರಿನ ಸುರಿಮಳೆಯನ್ನೇ ಸುರಿಸಿದರು.

ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹೀಗೆ ಹತ್ತಾರು ಸಮಸ್ಯೆಗಳು ಮನೆ ಮಾಡಿವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಿಲಯದ ಪ್ರಭಾರಿ ಮೇಲ್ವಿಚಾರಕ ತಮಗೇನು ತಿಳಿಯದಂತೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೆ ಜಿ.ಪಂ. ಸಿಇಒ ಹಾಗೂ ಜಿಲ್ಲಾಧಿಕಾರಿ ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿರುವುದನ್ನು ಸರಿಪಡಿಸಬೇಕು. ಕನಿಷ್ಠ ಸೌಲಭ್ಯ ಒದಗಿಸಿ, ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಬೇ‌ಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸಿದ್ದಾರೆ. 

ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರುವ ಕೋಣೆಯ ಶಿಥಿಲಗೊಂಡ ಮೇಲ್ಬಾವಣಿಯ ಸ್ಥಿತಿ 
ವಸತಿ ನಿಲಯಕ್ಕೆ ಭೇಟಿ ನೀಡಿ ಸೊಳ್ಳೆ ಪರದೆ ಬೇಡ್ ಶೀಟ್‌ಗಳನ್ನು ಕೂಡಲೆ ವಿತರಿಸಲಾಗುವುದು. ಮಕ್ಕಳಿಗೆ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಕಲ್ಪಿಸಿ ಪರಿಶೀಲನೆ ಮಾಡುತ್ತೇನೆ.
–ಸತೀಶಕುಮಾರ ಸಂಗಣ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ
ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಮಾಹಿತಿ ಇಲ್ಲ. ವಸತಿ ನಿಲಯಕ್ಕೆ ಭೇಟಿ ನೀಡಿ ಪರೀಶಿಲಿಸಿ ಸಮಸ್ಯೆ ಬಗೆಹರಿಸಲು ಹೇಳಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಶಶಿಧರ ಕೋಸಂಬೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.