ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಶುಲ್ಕದ ಹೆಸರಲ್ಲಿ ಎಸ್ಸೆಸ್ಸೆಲ್ಸಿ ಪ್ರವೇಶ ಪತ್ರ ನಿರಾಕರಣೆ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 13:43 IST
Last Updated 15 ಜುಲೈ 2021, 13:43 IST
ಬೀದರ್‌ನಲ್ಲಿ ಗುರುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಲ್ಕದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪ್ರವೇಶ ಪತ್ರ ಕೊಡಲು ನಿರಾಕರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಬೀದರ್‌ನಲ್ಲಿ ಗುರುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಲ್ಕದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪ್ರವೇಶ ಪತ್ರ ಕೊಡಲು ನಿರಾಕರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್: ಶುಲ್ಕದ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರವೇಶ ಪತ್ರ ಕೊಡಲು ನಿರಾಕರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ವೀರ ಕನ್ನಡಿಗರ ಸೇನೆ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಬಹುಜನ ಜಾಗೃತಿ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ ಚಳವಳಿ), ಕರ್ನಾಟಕ ಕೂಲಿ ಕಾರ್ಮಿಕರ ಸಂಘ, ಕಲ್ಯಾಣ ಕರ್ನಾಟಕ ಕಟ್ಟಡ ಇತರ ನಿರ್ಮಾಣ ಕಾರ್ಮಿಕರ ಮಹಾಸಂಘ ಹಾಗೂ ಕರ್ನಾಟಕ ಪ್ರಜಾಶಕ್ತಿ ಸಮಿತಿ ಪದಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರಿಗೆ ಜಂಟಿಯಾಗಿ ಬರೆದ ಮನವಿಪತ್ರವನ್ನು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಜುಲೈ 19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇವೆ. ಕೋವಿಡ್ ಕಾರಣ ಪಾಲಕರಿಗೆ ಮಕ್ಕಳ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ. ಆದರೆ, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಶುಲ್ಕ ಪಾವತಿಸದವರಿಗೆ ಪರೀಕ್ಷಾ ಪ್ರವೇಶ ಪತ್ರ ನೀಡಲು ನಿರಾಕರಿಸುತ್ತಿವೆ ಎಂದು ಆರೋಪಿಸಿದರು.

ADVERTISEMENT

ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಪತ್ರ ಕೊಡಿಸಬೇಕು. ಪ್ರವೇಶ ಪತ್ರ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪ್ರಾಚಾರ್ಯ, ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ಯಾವುದೇ ಪರೀಕ್ಷೆಗಳಲ್ಲಿ ಪ್ರವೇಶ ಪತ್ರದ ಹೆಸರಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಕಿರುಕುಳ ಕೊಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ ಚಳವಳಿ) ಜಿಲ್ಲಾ ಘಟಕದ ಅಧ್ಯಕ್ಷ ಗೌತಮ ಭೋಸ್ಲೆ, ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಶಿಂಧೆ, ಬಹುಜನ ಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮೋಳಕೆರೆ, ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಸ್ವಾನ್, ಮುಖಂಡರಾದ ಮುಕೇಶ ಶಹಾಗಂಜ್, ನಿತಿಶ್ ಸಕ್ಪಾಲ್, ಜೈ ಭೀಮ ಕುರುಬಖೇಳಗಿ, ಸೂರ್ಯಕಾಂತ ಸಾಧುರೆ, ಸಂತೋಷ ಸಿಂಧೆ, ಅಶೋಕ ವಗ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.