ADVERTISEMENT

ಬೀದರ್: ಕುಡಂಬಲ್‌ನಲ್ಲಿ ಸಮಸ್ಯೆಗಳ ತಾಂಡವ

ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 6:15 IST
Last Updated 15 ಜೂನ್ 2025, 6:15 IST
ಚಿಟಗುಪ್ಪ ತಾಲ್ಲೂಕಿನ ಕುಡಂಬಲ್ ಗ್ರಾಮದ ವಾರ್ಡ್ ಸಂಖ್ಯೆ–2ರಲ್ಲಿ ಕೊಳೆಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದು
ಚಿಟಗುಪ್ಪ ತಾಲ್ಲೂಕಿನ ಕುಡಂಬಲ್ ಗ್ರಾಮದ ವಾರ್ಡ್ ಸಂಖ್ಯೆ–2ರಲ್ಲಿ ಕೊಳೆಚೆ ನೀರು ರಸ್ತೆ ಮೇಲೆ ಹರಿಯುತ್ತಿರುವುದು   

ಚಿಟಗುಪ್ಪ (ಹುಮನಾಬಾದ್): ತಾಲ್ಲೂಕಿನ ಕುಡಂಬಲ್ ಗ್ರಾಮದ ಪರಿಶಿಷ್ಟರ ಬಡಾವಣೆ ಮೂಲ ಸೌಕರ್ಯದಿಂದ ವಂಚಿತವಾಗಿ ದೆ.

ಗ್ರಾಮದ ಬಹುತೇಕ ಬಡಾವಣೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ. ದುರ್ನಾತ ಬೀರುತ್ತದೆ. ಗ್ರಾಮದಲ್ಲಿ ಸೊಳ್ಳೆಗಳ ಕಾಟ ಸಹ ಹೆಚ್ಚಳವಾಗಿದೆ. ಇರುವ ಚರಂಡಿಗಳಲ್ಲಿಯೂ ಹೂಳು ತುಂಬಿಕೊಂಡಿರುವ ಕಾರಣ ಗ್ರಾಮಸ್ಥರಲ್ಲಿ ಸಾಂಕ್ರಮಿಕ ರೋಗ ಭೀತಿ ಎದುರಾಗಿದೆ.

ಹಲವು ತಿಂಗಳುಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು, ಜನಪ್ರತಿನಿದಿಗಳು ಬಂದು ಜನರ ಸಮಸ್ಯೆ ಆಲಿಸಿ ಹೋಗುತ್ತಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ ಎಂಬುದು ಜನರ ದೂರು. 

ADVERTISEMENT

‘ವಾರ್ಡ್ ಸಂಖ್ಯೆ–2ರಲ್ಲಿ ಬಹುತೇಕ ಪರಿಶಿಷ್ಟರೇ ವಾಸಿಸುತ್ತಿದ್ದೇವೆ. ಸಿಸಿ ರಸ್ತೆ, ಚರಂಡಿ ಸಮಸ್ಯೆ ಕಾಡುತ್ತಿದೆ. ಮಳೆಗಾಲ ಆರಂಭವಾಗಿದೆ. ಮಳೆ ಬಂದರೆ ಸಾಕು ಓಡಾಡುವುದಕ್ಕೂ ಬಾರದ ಪರಿಸ್ಥಿತಿ ನಮ್ಮದಾಗಿದೆ. ಚರಂಡಿಗಳ ನೀರು ಮನೆಯ ಮುಂದೆ ಬಂದು ನಿಲ್ಲುತ್ತಿದೆ. ನಮ್ಮ ಮಕ್ಕಳಿಗೆ ಮಲೇರಿಯಾದಂಥ ರೋಗಗಳು ಆಗಾಗ ಕಾಡುತ್ತಿದೆ. ಹೀಗಾಗಿ ಸಂಬಂಧಪಟ್ಟವರು ಚರಂಡಿ, ಸಿಸಿ ರಸ್ತೆ ನಿರ್ಮಾಣ ಮಾಡಬೇಕು’ ಎಂದು ನಿವಾಸಿ ಸತೀಶ ಆಗ್ರಹಿಸಿದ್ದಾರೆ.

ಸಮಸ್ಯೆ ಗಮನಕ್ಕೆ ಇರಲಿಲ್ಲ. ಶೀಘ್ರವೇ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಚರಂಡಿ ಸಮಸ್ಯೆ ಬಗೆಹರಿಸಲಾಗುವುದು.
– ಲಕ್ಷ್ಮೀ ಬಿರಾದಾರ, ತಾ.ಪಂ ಇಒ

ಹಣ ಸುರಿದರೂ ಬಗೆಹರಿಯದ ಸಮಸ್ಯೆ

ಗ್ರಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಮನೆಗಳಿವೆ. ಆರು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿದೆ. ಈ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲ ಜೀವನ ಮಷಿನ್ ಯೋಜನೆಯಡಿ ಕಾಮಗಾರಿ ನಡೆದಿದೆ.‌ ಆದರೆ ಉಪಯೋಗಕ್ಕೆ ಬಾರದಂತಾಗಿದೆ. ಯೋಜನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಗ್ರಾಮದ ಜನರು ಯೋಜನೆಯಿಂದ ವಂಚಿತರಾಗಿದ್ದಾರೆ.

ಸಮರ್ಪಕವಾಗಿ ಸಿಗದ ನೀರು

ಗ್ರಾಮದಲ್ಲಿ ಒಂದು ಬಡಾವಣೆಗೆ ನೀರು ಬಂದರೆ ಅದರ ಪಕ್ಕದ ಬಡಾವಣೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ಗ್ರಾಮದ ಪಾರಮ್ಮ ನಾಗಮ್ಮ ಹಾಗೂ ಸರಸ್ವತಿ ಆಕ್ರೋಶ ವ್ಯಕ್ತಪಡಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.