ADVERTISEMENT

ಮನೆ ಮೇಲಿನ ವಿದ್ಯುತ್ ತಂತಿ ತೆರವಿಗೆ ಕ್ರಮ

ನಾರಾಯಣಪುರದಲ್ಲಿ ವಿವಿಧ ಸಮಸ್ಯೆಗಳ ಅಹವಾಲು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 3:07 IST
Last Updated 23 ಫೆಬ್ರುವರಿ 2021, 3:07 IST
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಸೋಮವಾರ ಗ್ರಾಮ ವಾಸ್ತವ್ಯ ಅಂಗವಾಗಿ ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಬಾಲಕಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದರು. ಸಿಡಿಪಿಒ ಶಾರದಾ ಕಲ್ಮಲಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರದಲ್ಲಿ ಸೋಮವಾರ ಗ್ರಾಮ ವಾಸ್ತವ್ಯ ಅಂಗವಾಗಿ ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಬಾಲಕಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದರು. ಸಿಡಿಪಿಒ ಶಾರದಾ ಕಲ್ಮಲಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ ಇದ್ದರು   

ನಾರಾಯಣಪುರ (ಬಸವಕಲ್ಯಾಣ): ತಾಲ್ಲೂಕಿನ ನಾರಾಯಣಪುರದಲ್ಲಿ ಸೋಮವಾರ ನಡೆದ ತಹಶೀಲ್ದಾರ್ ನಡೆ ಹಳ್ಳಿ ಕಡೆ ಹಾಗೂ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಗ್ರಾಮದಲ್ಲಿನ ಅನೇಕರ ಮನೆ ಮಾಳಿಗೆಗಳ ಮೇಲಿನಿಂದ ಹಾದು ಹೋಗಿರುವ ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ತಂತಿಯನ್ನು ಬೇರೆಡೆ ಅಳವಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ತಹಶೀಲ್ದಾರ್ ಸಾವಿತ್ರಿ ಸಲಗರ ಭರವಸೆ ನೀಡಿದರು.

ಸಭೆಯಲ್ಲಿ ಒಟ್ಟು 47 ಅರ್ಜಿಗಳು ಸಲ್ಲಿಕೆಯಾದವು. ಮಾಸಾಶನ, ಆಧಾರ್‌ ಕಾರ್ಡ್ ನೀಡುವುದು, ಅರ್ಹರಿಗೆ ಪಡಿತರ ಚೀಟಿ ವಿತರಣೆ ಒಳಗೊಂಡು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಾಗಿದ್ದವು. ಅವುಗಳಲ್ಲಿ ಅರ್ಧದಷ್ಟನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು.

ಇಬ್ಬರು ಬಾಲಕಿಯರಿಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುವ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು. ನಾಲ್ವರಿಗೆ ವೃದ್ಧಾಪ್ಯ ಹಾಗೂ ವಿಧವಾ ವೇತನದ ಆದೇಶಪತ್ರಗಳನ್ನು ವಿತರಿಸಲಾಯಿತು.

ADVERTISEMENT

ಸರ್ಕಾರಿ ಪ್ರೌಢಶಾಲೆ, ಅಂಗನವಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿನಿಲಯ, ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ರಸ್ತೆ, ಚರಂಡಿ ವ್ಯವಸ್ಥೆ ವೀಕ್ಷಿಸಲಾಯಿತು. ಉಪ ವಿಭಾಗಾಧಿಕಾರಿ ಭೂವನೇಶ ಪಾಟೀಲ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತರೆಡ್ಡಿ, ಸಂಜಯ ಕಾಂಗೆ ಪಾಲ್ಗೊಂಡಿದ್ದರು.

ಜಾಗೃತಿ ಮೂಡಲಿ

ಅಹವಾಲು ಸ್ವೀಕಾರ ಸಭೆಯನ್ನು ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ ಮಾತನಾಡಿ, `ಮಹಿಳೆಯರಲ್ಲಿ ಜಾಗೃತಿ ಮೂಡಬೇಕು. ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು. ಎಲ್ಲ ರಂಗಗಳ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು’ ಎಂದರು.

ತಹಶೀಲ್ದಾರ್ ಸಾವಿತ್ರಿ ಸಲಗರ ಮಾತನಾಡಿ, `ಗ್ರಾಮಗಳಲ್ಲಿನ ಸಮಸ್ಯೆ ಅರಿತು ಅವುಗಳನ್ನು ಬಗೆಹರಿಸುವುದಕ್ಕೆ ಪ್ರಯತ್ನ ನಡೆಯಲಿ ಎಂಬ ಸದುದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರು ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು’ ಎಂದು ಸಲಹೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಾರದಾ ಕಲ್ಮಲಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಾರ್ವತಿಬಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.