ಬೀದರ್: ಜಿಲ್ಲೆಯಲ್ಲಿ ದಲಿತರು ಹಾಗೂ ಇತರೆ ಸಮುದಾಯದವರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಭಾವಚಿತ್ರ ದಹಿಸಿ ಆಕ್ರೋಶ ಹೊರಹಾಕಿದರು. ಘೋಷಣೆ ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಸ್ವೀಕರಿಸಲು ಬಂದಾಗ ನೀಡಲು ನಿರಾಕರಿಸಿದರು. ಜಿಲ್ಲಾಧಿಕಾರಿಯೇ ಬಂದು ಸ್ವೀಕರಿಸಬೇಕೆಂದು ಪಟ್ಟು ಹಿಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸುಮಾರು ಎರಡು ಗಂಟೆಗೂ ಅಧಿಕ ಸಮಯದ ನಂತರ ಬಂದು ಮನವಿ ಪತ್ರ ಸ್ವೀಕರಿಸಿದರು. ಡಿಸಿ ಬರಲು ವಿಳಂಬವಾಗಿದ್ದರಿಂದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಪ್ರತಿಭಟನೆಯ ಜಾಗದಲ್ಲೇ ಆಹಾರ ಸೇವಿಸಿದರು.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ದಲಿತರ ಮೇಲೆ ದೌರ್ಜನ್ಯ, ಜಾತಿನಿಂದನೆ, ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗಿವೆ. ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮಳಚಾಪೂರದಲ್ಲಿ ಸರ್ಕಾರದಿಂದ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಜಾಥಾ ಮೇಲೆ ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ನಡೆಸಿ, ಮೆರವಣಿಗೆಗೆ ಅಡ್ಡಿಪಡಿಸಿದ್ದರು. ಇದುವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಭಾಲ್ಕಿ ತಾಲ್ಲೂಕಿನ ತಳವಾಡ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಜಾತಿ ನಿಂದನೆ ಮಾಡಿದ ಪ್ರಕರಣ ದಾಖಲಾದರೂ ಕಾನೂನು ಕ್ರಮ ಕೈಗೊಂಡಿಲ್ಲ. ಭಾಲ್ಕಿ ತಾಲ್ಲೂಕಿನ ಚಳಕಾಪೂರದಲ್ಲಿ ದಲಿತರ ಕೇರಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಪ್ರಕರಣ ದಾಖಲಾಗಿದ್ದರೂ ಯಾರನ್ನೂ ಬಂಧಿಸಿಲ್ಲ. ಆದರೆ, 118 ಜನ ದಲಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
ಬೀದರ್ ತಾಲ್ಲೂಕಿನ ವಿಳಾಸಪೂರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಭೀಮಾ ಕೋರೆಗಾಂವ್ ವಿಜಯೋತ್ಸವದ ವೇಳೆ ಬಾಬಾಸಾಹೇಬರ ಫ್ಲೆಕ್ಸ್ ಹರಿದು ಅವಮಾನಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಕಾಟಾಚಾರಕ್ಕೆ ಬಂಧಿಸಿ ಬಿಡುಗಡೆಗೊಳಿಸಲಾಗಿದೆ. ಔರಾದ್ ತಾಲ್ಲೂಕಿನ ಬೇಡಕುಂದಾ ಗ್ರಾಮದ ದಲಿತ ಸಮುದಾಯದ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದಕ್ಕಾಗಿ ಆತನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪತ್ರಕರ್ತ ರವಿ ಭೂಸಂಡೆ ಮೇಲೆ ಹಲ್ಲೆ ನಡೆಸಿದ ಅರಣ್ಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾದ ಇನ್ನೂ ಮೂವರ ವಿರುದ್ಧ ಕ್ರಮ ಕೈಗೊಂಡಿಲ್ಲ. ದಲಿತರ ಇನಾಮ್ ಜಮೀನು ಸರ್ಕಾರಿ ಭೂಮಿಯೆಂದು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ನಿತ್ಯ ಕೊಲೆ, ದರೋಡೆಗಳು ಸಾಮಾನ್ಯವಾಗಿವೆ. ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದಲ್ಲಿ ಒಬ್ಬರು ಸಾವನ್ನಪ್ಪಿದರೂ ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ.ಉಸ್ತುವಾರಿ ಸಚಿವರು ತಮ್ಮ ಪ್ರಭಾವ ಬಳಸಿಕೊಂಡು ಹೋರಾಟಗಾರರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೋಲೆ ಮೇಲೆ ಸುಳ್ಳು ಕೇಸ್ ದಾಖಲಿಸಿ, ಎಸ್ಪಿ ಮೂಲಕ ಕಿರುಕುಳ ಕೊಡಿಸಿದ್ದಾರೆ. ಉಸ್ತುವಾರಿ ಸಚಿವರ ಮತಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅವರು ಸರಿಯಾಗಿ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಕೂಡಲೇ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ವರ್ಗಾವಣೆಗೊಳಿಸಬೇಕು. ಜಿಲ್ಲೆಯಾದ್ಯಂತ ದಲಿತರ ಮೇಲಿನ ಕೇಸುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ವಿನೋದ ರತ್ನಾಕರ, ಗೌರವ ಅಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ, ಪ್ರಧಾನ ಕಾರ್ಯದರ್ಶಿ ಅಮೃತ ಮುತ್ತಂಗಿಕರ, ಉಪಾಧ್ಯಕ್ಷ ಸುಭಾಷ ಲಾಧಾ, ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಗೌತಮ ಪ್ರಸಾದ್, ಬೀದರ್ ದಕ್ಷಿಣ ಅಧ್ಯಕ್ಷ ರಾಜಕುಮಾರ ಸಿಂಧೆ, ಔರಾದ್ ಘಟಕದ ಅಧ್ಯಕ್ಷ ಸಂತೋಷ ಸಿಂಧೆ, ಕಮಲನಗರ ಘಟಕದ ಅಧ್ಯಕ್ಷ ಉತ್ತಮ ಖೇಡ, ಬೀದರ್ ಘಟಕದ ಅಧ್ಯಕ್ಷ ಅಂಬರೀಷ ಕುದುರೆ, ರಾಜಕುಮಾರ ಡೊಂಗ್ರೆ, ಸುನೀಲ ಚಂದಾ, ಅಂಬಾದಾಸ ಚಕ್ರವರ್ತಿ, ರಾಹುಲ ಖಂದಾರೆ, ಸಚಿನ್ ಗಿರಿ, ಶಕ್ತಿಕಾಂತ ಬಾವಿದೊಡ್ಡಿ, ರಜನಿಕಾಂತ ನಾಯಕ, ಸತೀಶ ದೊಡ್ಡಿ, ಶಂಕರ ಫುಲೆ, ಮಹೇಶ ಭೋಲಾ, ದಿಲೀಪ ಚಂದಾ, ಮಲ್ಲಿಕಾರ್ಜುನ ಕಪಲಾಪೂರೆ, ಸುರೇಶ ಜೋಜನಾಕರ ಮತ್ತಿತರರು ಪಾಲ್ಗೊಂಡಿದ್ದರು.
Highlights - ಮುಖ್ಯಾಂಶಗಳು... ಹೋರಾಟಗಾರರ ಮೇಲೆ ಸುಳ್ಳು ಕೇಸ್ ಎಸ್ಪಿ ಪ್ರದೀಪ್ ಗುಂಟಿ ವರ್ಗಾವಣೆಗೆ ಆಗ್ರಹ ದಲಿತರ ವಿರುದ್ಧದ ಕೇಸ್ ಹಿಂಪಡೆಯಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.