ಜನವಾಡ: ಬೀದರ್ ಮಹಾನಗರ ವ್ಯಾಪ್ತಿಗೆ ಸೇರ್ಪಡೆಯಾದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಕೂಡಲೇ ಅನುದಾನ ನೀಡಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು.
ಬೀದರ್ ತಾಲ್ಲೂಕಿನ ಕಮಲಪುರ, ಹಜ್ಜರಗಿ ಗ್ರಾಮಗಳಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಆಲಿಸಿದ ಬಳಿಕ, ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬೇಡಿಕೆ ಮಂಡಿಸಿದರು.
ಅಮಲಾಪುರ, ಗೋರನಳ್ಳಿ, ಚೊಂಡಿ, ಚೌಳಿ, ಕೊಳಾರ (ಕೆ), ಹಜ್ಜರಗಿ, ಕಮಲಪುರ, ನಿಜಾಂಪುರ ಗ್ರಾಮಗಳನ್ನು ಬೀದರ್ ಮಹಾನಗರ ಪಾಲಿಕೆಗೆ ಸೇರಿಸಲಾಗಿದೆ. ಆದರೆ, ಈವರೆಗೂ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಒದಗಿಸಿಲ್ಲ. ಹೀಗಾಗಿ ಸಾರ್ವಜನಿಕರು ಮೂಲಸೌಕರ್ಯಕ್ಕೆ ಪರದಾಡುವಂತಾಗಿದೆ ಎಂದು ಗಮನ ಸೆಳೆದರು.
ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಮೊದಲಾದ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಪರಿಹಾರ ಒದಗಿಸಿ’: ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಮೃತಪಟ್ಟ ಚಿಟ್ಟಾದ ರೈತ ಪ್ರಭುರಾವ್ ಅವರ ಕುಟುಂಬಕ್ಕೆ ₹15 ಲಕ್ಷ ಪರಿಹಾರ ಕೊಡಬೇಕು ಎಂದು ಬೆಲ್ದಾಳೆ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು,‘ಎರಡು ದಿನಗಳಲ್ಲಿ ₹5 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಬೆಲ್ದಾಳೆ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.