ADVERTISEMENT

ನರೇಗಾ: ಕೆಲಸ ನೀಡಲು ಸೂಚನೆ

ಶಾಸಕ ಈಶ್ವರ ಖಂಡ್ರೆ ಅವರಿಂದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 10:00 IST
Last Updated 26 ಏಪ್ರಿಲ್ 2020, 10:00 IST
ಭಾಲ್ಕಿ ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ಶನಿವಾರ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಶಾಸಕ ಈಶ್ವರ ಖಂಡ್ರೆ ವೀಕ್ಷಿಸಿದರು
ಭಾಲ್ಕಿ ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ಶನಿವಾರ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಶಾಸಕ ಈಶ್ವರ ಖಂಡ್ರೆ ವೀಕ್ಷಿಸಿದರು   

ಭಾಲ್ಕಿ: ತಾಲ್ಲೂಕಿನ ಉಚ್ಛಾ ಹಾಗೂ ಮೊರಂಬಿ ಗ್ರಾಮಗಳಿಗೆ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲಿಸಿದರು.

ಅಧಿಕಾರಿಗಳ ತಂಡದೊಂದಿಗೆ ಶನಿವಾರ ಉಚ್ಛಾ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಚೆಕ್‍ಡ್ಯಾಂ ಹಾಗೂ ಮೊರಂಬಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಸಮೀಪ ಗಿಡ ನೆಡಲು ತೊಡುತ್ತಿರುವ ತಗ್ಗುಗಳನ್ನು ವೀಕ್ಷಿಸಿ, ಉದ್ಯೋಗ ಖಾತ್ರಿ ಚೀಟಿ ವಿತರಿಸಿದರು.

ಬಳಿಕ ಮಾತನಾಡಿದ ಈಶ್ವರ ಖಂಡ್ರೆ,‘ಕ್ಷೇತ್ರದ ಬಡಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ವೈಯಕ್ತಿಕವಾಗಿ ನಾನು ಹಾಗೂ ನನ್ನ ಬೆಂಬಲಿಗರು ಆಹಾರದ ಪೊಟ್ಟಣ, ತರಕಾರಿ ಕಿಟ್ ನೀಡಿದ್ದೇವೆ. ಪಡಿತರ ಕಾರ್ಡ್ ಹೊಂದಿದ ಎಲ್ಲ ಫಲಾನುಭವಿಗಳಿಗೆ, ಕಾರ್ಡ್ ರಹಿತ ಎಲ್ಲರಿಗೂ ಎರಡು ತಿಂಗಳ ಪಡಿತರ ಮುಂಗಡವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಬಡವರು, ಕೂಲಿ ಕಾರ್ಮಿಕರು ಇಂಥ ಸಂಕಷ್ಟದ ಸಮಯದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಎಲ್ಲ 40 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನರೇಗಾ ಯೋಜನೆ ಅಡಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಒಬ್ಬರಿಗೆ ₹275 ಕೂಲಿಯಂತೆ ಪ್ರತಿದಿನ ಕನಿಷ್ಟ 250 ಜನರಿಗೆ 25 ದಿವಸ ಕೆಲಸ ನೀಡುವಂತೆ ಸೂಚನೆ ನೀಡಲಾಗಿದೆ ಯಾರು ಆತಂಕ ಪಡಬೇಕಿಲ್ಲ’ ಎಂದು ತಿಳಿಸಿದರು.

ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕಾಲಕಾಲಕ್ಕೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ತಮ್ಮ ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಕೋನಮೇಳಕುಂದಾ ಗ್ರಾ.ಪಂ ಅಧ್ಯಕ್ಷ ಶಶಿಧರ ಕೋಸಂಬೆ ಹಾಗೂ ಮೊರಂಬಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಹುಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.