ಬೀದರ್: ದ್ವಿತೀಯ ಪಿಯುಸಿಯ 2021-22ನೇ ಸಾಲಿನ ಮಧ್ಯಾವಧಿ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆಸಲು ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಕಾರಣ ಪಿಯುಸಿ ಪ್ರಥಮ ವರ್ಷದ ತರಗತಿಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಮೂರು-ನಾಲ್ಕು ತಿಂಗಳು ತಡವಾಗಿ ತರಗತಿಗಳು ಪ್ರಾರಂಭವಾಗಿವೆ. ಮಧ್ಯಾವಧಿ ಪರೀಕ್ಷೆಗೆ ಇನ್ನೂ ಪಠ್ಯಕ್ರಮಗಳು ಮುಗಿದಿಲ್ಲ. ಇಂತಹ ಸಂದರ್ಭದಲ್ಲಿ ಮಂಡಳಿ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳ ಮೇಲೆ ಬಹಳ ಒತ್ತಡ ಹೇರಿದಂತಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಇದರಿಂದ ವಿದ್ಯಾರ್ಥಿಗಳಷ್ಟೇ ಅಲ್ಲ; ಪ್ರಾಧ್ಯಾಪಕರು, ಪೋಷಕರು ಸಹ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಾವಧಿ ಮಂಡಳಿ ಪರೀಕ್ಷೆ ಆದೇಶ ಹಿಂಪಡೆದು 2022 ರ ಜೂನ್‍ನಲ್ಲಿ ವಾರ್ಷಿಕ ಪರೀಕ್ಷೆ ನಡೆಸಬೇಕು. ಮಧ್ಯಾವಧಿ ಪರೀಕ್ಷೆಯನ್ನು ಮೊದಲಿನಂತೆ ಕಾಲೇಜು ಮಟ್ಟದಲ್ಲೇ ನಡೆಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.