ADVERTISEMENT

ಖಾನಾಪೂರ ಏತ ನೀರಾವರಿ ಕಾಮಗಾರಿ ಶೀಘ್ರ ಆರಂಭ: ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:14 IST
Last Updated 24 ಜೂನ್ 2021, 5:14 IST
ಪ್ರಭು ಚವಾಣ್
ಪ್ರಭು ಚವಾಣ್   

ಔರಾದ್: ‘ತಾಲ್ಲೂಕಿನ ಖಾನಾಪೂರ ಏತ ನೀರಾವರಿ ಯೋಜನೆ ಪುನರುಜ್ಜೀವನಕ್ಕಾಗಿ ಸರ್ಕಾರ ಈಗಾಗಲೇ ₹9.88 ಕೋಟಿಯ ಕಾಮಗಾರಿಗೆ ಅನುಮೋದನೆ ನೀಡಿದ್ದು, ಕಾಮಗಾರಿ ಶೀಘ್ರ ಆರಂಭವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

‘ಪ್ರಸ್ತುತ ತಾತ್ಕಾಲಿಕ ನಿಷ್ಕ್ರೀಯವಾಗಿರುವ ಯೋಜನೆಯನ್ನು ಪುನರುಜ್ಜೀವನಗೊಳಿಸಿ, ಜನರಿಗೆ ಉಪಯೋಗ ಆಗುವಂತೆ ಮಾಡಲು ಈ ಹಿಂದಿನಿಂದಲೂ ಖಾನಾಪುರ ಮತ್ತು ಹೊರಂಡಿ ಏತ ನೀರಾವರಿ ಯೋಜನೆಗಳ ಅನುಮೋದನೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮೇಲೆ ಪದೇಪದೇ ಒತ್ತಡ ಹೇರಿದ್ದರ ಪರಿಣಾಮ ಅನುದಾನ ಬಿಡುಗಡೆಯಾಗಿದೆ’ ಎಂದು ಹೇಳಿದ್ದಾರೆ.

‘ಕಾಮಗಾರಿಯಲ್ಲಿ ಹೊಸದಾಗಿ ಇನ್‍ಟೇಕ್ ಪೈಪ್‍ಗಳನ್ನು ಅಳವಡಿಸುವುದು, ಕನೆಕ್ಟಿಂಗ್ ಪೈಪ್‍ಲೈನ್, ಹೊಸ ಪಂಪ್‌ಹೌಸ್ ನಿರ್ಮಾಣ, ಸೆಕ್ಷನ್ ಪೈಪ್, ಡೆಲಿವರ್ ಪೈಪ್ ಬದಲಾಯಿಸುವುದು, ಪ್ರಸ್ತುತ ಕೆಲಸ ನಿರ್ವಹಿಸದ ಪಂಪಿಂಗ್ ಯಂತ್ರಗಳನ್ನು ಬದಲಾಯಿಸುವುದು ಸೇರಿದಂತೆ ಪವರ್ ಟ್ರಾನ್ಸ್‌ಫಾರ್ಮರ್, ಮೋಟಾರ್ ಹಾಗೂ ಮತ್ತಿತರೆ ವಿದ್ಯುತ್ ಉಪಕರಣಗಳನ್ನು ಬದಲಾಯಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಕಾಮಗಾರಿಯನ್ನು ಆರಂಭಿಸಬೇಕು. ಕಾಮಗಾರಿ ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸುವಂತೆ’ ಸಚಿವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.