ADVERTISEMENT

ಪಂಚಾಯಿತಿಗಳ ಕೋವಿಡ್ ಅನುದಾನ ಹೆಚ್ಚಿಸಿ

ಐಸೋಲೇಷನ್ ಕಿಟ್ ವಿತರಣೆ: ಎಐಸಿಸಿ ಸದಸ್ಯರಾದ ಆನಂದ ದೇವಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2021, 4:12 IST
Last Updated 22 ಮೇ 2021, 4:12 IST
ಬಸವಕಲ್ಯಾಣದಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ವತಿಯಿಂದ ಕೊರೊನಾ ಸೋಂಕಿತರ ಐಸೋಲೇಷನ್ ಕಿಟ್ ವಿತರಿಸಲಾಯಿತು
ಬಸವಕಲ್ಯಾಣದಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ವತಿಯಿಂದ ಕೊರೊನಾ ಸೋಂಕಿತರ ಐಸೋಲೇಷನ್ ಕಿಟ್ ವಿತರಿಸಲಾಯಿತು   

ಬಸವಕಲ್ಯಾಣ: ‘ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುತ್ತಿರುವ ₹50 ಸಾವಿರ ಕೋವಿಡ್ ನಿರ್ವಹಣೆ ಅನುದಾನ ಸಾಕಾಗುವುದಿಲ್ಲ. ಅದನ್ನು ಒಂದು ಕೋಟಿಗೆ ಹೆಚ್ಚಿಸಬೇಕು’ ಎಂದು ಎಐಸಿಸಿ ಸದಸ್ಯ ಆನಂದ ದೇವಪ್ಪ ಆಗ್ರಹಿಸಿದ್ದಾರೆ.

ನಗರದ ಭೋಸ್ಗೆ ಸಭಾಂಗಣದಲ್ಲಿ ಶುಕ್ರವಾರ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಯುವ ಕಾಂಗ್ರೆಸ್‌ ಆಯೋಜಿಸಿದ್ದ ರಾಜೀವ್‌ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೋವಿಡ್ ಐಸೋಲೇಷನ್ ಕಿಟ್ ವಿತರಿಸಿ ಅವರು ಮಾತನಾಡಿದರು. ‘ರಾಜೀವ್‌ಗಾಂಧಿ ದೂರದೃಷ್ಟಿಯುಳ್ಳ, ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದ ನಾಯಕ ಆಗಿದ್ದರು. ಭಾರತವು ತಾಂತ್ರಿಕ, ದೂರಸಂಪರ್ಕ ಹಾಗೂ ಯುದ್ಧ ಕೌಶಲದಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿ ರಬೇಕು ಎಂಬ ಕನಸು ಕಂಡಿದ್ದರು. ಗ್ರಾಮ ಪಂಚಾಯಿತಿ ಒಳಗೊಂಡು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಕೂಡ ಅವರೇ ಜಾರಿಗೊಳಿಸಿದರು. ಪಂಚಾಯಿತಿಗಳು ಆರ್ಥಿಕವಾಗಿ ಸಬಲವಾದರೆ ಮಾತ್ರ ದೇಶದೋದ್ಧಾರ ಆಗಬಲ್ಲದು ಎಂಬುದನ್ನು ಮನಗಂಡು ಆ ನಿಟ್ಟಿನಲ್ಲಿ ಪ್ರಯತ್ನಶೀಲ ಆಗಿದ್ದರು. ಆದರೆ, ಇಂದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಂಚಾಯಿತಿಗಳನ್ನು ಕಡೆಗಣಿಸುತ್ತಿವೆ’ ಎಂದರು.

‘ಕೋವಿಡ್ ಲಾಕ್‌ಡೌನ್‌ ಕಾರಣ ರಾಜ್ಯ ಸರ್ಕಾರ ಕೃಷಿಕರು ಹಾಗೂ ಕೂಲಿ ಕಾರ್ಮಿಕರು, ಕುಶಲ ಕರ್ಮಿಗಳಿಗೆ ಘೋಷಿಸಿರುವ ಪ್ಯಾಕೇಜ್ ಸಮರ್ಪಕ ಆಗಿಲ್ಲ. ಇವರು ನೀಡಿರುವ ಪರಿಹಾರದ ಹಣ ಯಾತಕ್ಕೂ ಸಾಕಾಗುವುದಿಲ್ಲ. ಅಲ್ಲದೆ, ಎಲ್ಲ ವರ್ಗದ ಶ್ರಮಿಕರಿಗೆ ಪರಿಹಾರ ದೊರೆತಿಲ್ಲ. ಇದಕ್ಕಿಂತ ಮುಖ್ಯವೆಂದರೆ, ಕೋವಿಡ್ ತಪಾಸಣೆ, ಚಿಕಿತ್ಸೆಯಲ್ಲಿ ನಿರ್ಲಕ್ಷ ತೋರಲಾಗುತ್ತಿದೆ. ಇನ್ನು ಮುಂದಾದರೂ ಉತ್ತಮ ವ್ಯವಸ್ಥೆ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸಂದೀಪ ಬುಯೆ ಮಾತನಾಡಿ,‘ಕೊರೊನಾ ಸೋಂಕಿತರಿಗೆ ವೈದ್ಯರು ಸೂಚಿಸಿರುವ ಜ್ವರ ಮತ್ತು ಕೆಮ್ಮಿನ ಐದು ತರಹದ ಮಾತ್ರೆ ಹಾಗೂ ಔಷಧವನ್ನು ಕಿಟ್ ರೂಪದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಸದ್ಯಕ್ಕೆ 500 ಕಿಟ್‌ಗಳು ಲಭ್ಯ ಇವೆ. ಕಿಟ್ ಅಗತ್ಯವಿದ್ದವರು 9611221242, 7795099971, 9880138831, 7019950778 ಈ ಸಂಖ್ಯೆಗಳಿಗೆ ಸಂಪರ್ಕಿಸಬೇಕು. ವೈದ್ಯರ ಸಲಹೆ ಅಗತ್ಯವಿದ್ದರೆ 7204527379, 9986926365 ಈ ಸಂಖ್ಯೆಗಳಿಗೆ ಸಂಪರ್ಕಿಸಬೇಕು’ ಎಂದು ಅವರು ಕೇಳಿಕೊಂಡರು.

ADVERTISEMENT

ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಅರ್ಜುನ ಕನಕ, ಹಿರಿಯ ಮುಖಂಡರಾದ ಮನೋಹರ ಮೈಸೆ, ಪೃಥ್ವಿಗಿರಿ ಗೋಸಾಯಿ, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಇಲಿಯಾಸ್ ಕುರೇಶಿ, ಸವೂದ್ ಭೋಸ್ಗೆ, ರಾಜಕುಮಾರ ಹೊಳಕಡೆ, ಶಶಿಕಾಂತ ಗುರಣ್ಣ, ಸಿದ್ದು ಕಾಮಣ್ಣ, ಕೀಜರ್ ನಿಜಾಮಿ ಹಾಗೂ ಮಾಜೀದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.