ADVERTISEMENT

ಬೀದರ್ | ಪವಿತ್ರತೆಯ ರಕ್ಷಾ ಸೂತ್ರವೇ ರಕ್ಷಾ ಬಂಧನ: ಪ್ರತಿಮಾ

ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 14:25 IST
Last Updated 2 ಆಗಸ್ಟ್ 2020, 14:25 IST
ಬೀದರ್‌ನ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಭಾನುವಾರ ರಕ್ಷಾ ಬಂಧನದ ಪ್ರಯುಕ್ತ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಮಾತನಾಡಿದರು
ಬೀದರ್‌ನ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಭಾನುವಾರ ರಕ್ಷಾ ಬಂಧನದ ಪ್ರಯುಕ್ತ ಆಯೋಜಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಮಾತನಾಡಿದರು   

ಬೀದರ್: ‘ಪವಿತ್ರತೆಯ ರಕ್ಷಾ ಸೂತ್ರವೇ ರಕ್ಷಾ ಬಂಧನ’ ಎಂದು ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಹೇಳಿದರು.

ಇಲ್ಲಿಯ ರಾಜಯೋಗ ಕೇಂದ್ರದ ಅವರಣದಲ್ಲಿ ರಕ್ಷಾ ಬಂಧನದ ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಆನ್‍ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಆಚರಿಸುವ ಹಬ್ಬಗಳ ವಿಧಿ ವಿಧಾನಗಳಲ್ಲೂ ಬದಲಾವಣೆಗಳಾಗಿವೆ. ಅದಕ್ಕೆ ಕಾರಣವಾದ ಅಂಶಗಳನ್ನು ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಅರಿತುಕೊಂಡು ಹಬ್ಬಗಳನ್ನು ಸಾಂಕೇತಿಕವಾಗಿ ಆಚರಿಸಬೇಕು’ ಎಂದು ತಿಳಿಸಿದರು.

ADVERTISEMENT

‘ರಕ್ಷಾ ಬಂಧನದ ಸಂದರ್ಭದಲ್ಲಿ ಪರಮಾತ್ಮನ ಪವಿತ್ರತೆಯ ಶಕ್ತಿಯ ಸೂತ್ರದಲ್ಲಿ ಬಂಧಿತರಾಗಿ ನಮ್ಮಲ್ಲಿ ದೈವಿ ಗುಣ ಅಥವಾ ದಿವ್ಯ ಗುಣಗಳನ್ನು ಧಾರಣೆ ಮಾಡಿ ನಮ್ಮ ಮಧುರ ಮಾತಿನಿಂದ, ವ್ಯವಹಾರದಿಂದ ಸ್ವಯಂ ಪರಿವರ್ತನೆಯೊಂದಿಗೆ ಸರ್ವರಲ್ಲಿಯೂ ಪರಿವರ್ತನೆ ತರಬೇಕಾಗಿದೆ’ ಎಂದು ಹೇಳಿದರು.

‘ನಮ್ಮ ಸಂಸ್ಕೃತಿ ರಕ್ಷಣೆ ಜತೆಗೆ ನಮ್ಮವರನ್ನೂ ರಕ್ಷಣೆ ಮಾಡುವ ಜಬಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಮ್ಮಲ್ಲಿ ದುಷ್ಟ ಗುಣಗಳು ಮನೆ ಮಾಡದಂತೆ ಎಚ್ಚರಿಕೆ ವಹಿಸಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಪಾವಿತ್ರ್ಯ ನೆಲೆಸುವಂತೆ ಮಾಡೋಣ’ ಎಂದು ನುಡಿದರು.

‘ಪ್ರತಿಯೊಬ್ಬರ ಸ್ನೇಹಿಯಾಗಿ, ಶುಭ ಚಿಂತಕರಾಗಿ, ಪರಮಾತ್ಮನ ಶ್ರೇಷ್ಠ ಸಂದೇಶವನ್ನು ಸರ್ವರಿಗೂ ತಲುಪಿಸಿ ಸಶಕ್ತರನ್ನಾಗಿ ಮಾಡೋಣ. ನಿರುತ್ಸಾಹಿಗಳಿಗೆ ಉತ್ಸಾಹ ತುಂಬುವಂತಹ ಶ್ರೇಷ್ಠ ಸೇವೆಯನ್ನು ಗೈಯೋಣ. ಆಚಾರ, ವಿಚಾರ, ವ್ಯವಹಾರ ಎಲ್ಲದರಲ್ಲಿಯೂ ಶುದ್ಧತೆ ಕಾಪಾಡೋಣ. ಈ ಮೂಲಕ ಸಹೋದರತ್ವ ಭಾವನೆಯನ್ನು ಜಾಗೃತಗೊಳಿಸೋಣ’ ಎಂದರು.

ಈ ಆನ್‍ಲೈನ್ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾವನಧಾಮದ ಸಹೋದರ ಹಾಗೂ ಸಹೋದರಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.