ADVERTISEMENT

ಬೀದರ್‌: 11ರಂದು ರಾಮರಾವ್ ಮಹಾರಾಜರ ಅಸ್ಥಿ ಪೂಜೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 15:49 IST
Last Updated 8 ನವೆಂಬರ್ 2020, 15:49 IST

ಬೀದರ್‌: ಪೌರಾದೇವಿಯಲ್ಲಿ ದೈವಾಧೀನರಾದ ಬಂಜಾರಾ ಸಮಾಜದ ಧರ್ಮಗುರು ರಾಮರಾವ್ ಮಹಾರಾಜರ ಅಸ್ಥಿ ಪೂಜೆ ಮತ್ತು ದರ್ಶನ, ಅವರ ಮಂದಿರದ ಭೂಮಿ ಪೂಜೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ನವೆಂಬರ್ 10 ಹಾಗೂ 11 ರಂದು ಘಮಸುಬಾಯಿ ತಾಂಡಾದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.

ಬಾಲಬ್ರಹ್ಮಚಾರಿಯಾಗಿದ್ದ ರಾಮರಾವ್ ಮಹಾರಾಜರು ಸಂತ ಸೇವಾಲಾಲ್ ಮಹಾರಾಜರ ನಂತರದ ಬಂಜಾರಾ ಸಮುದಾಯ ಏಕೈಕ ಧರ್ಮಗುರುಗಳಾಗಿದ್ದರು. 10ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀಗಳು ತಮ್ಮ ಅಂತಿಮ ದಿನದ ವರೆಗೂ ನಿರಾಹಾರಿಗಳಾಗಿದ್ದರು.

50ರ ದಶಕದಿಂದೀಚೆಗೆ ಭಾರತದಾದ್ಯಂತ ಸಂಚರಿಸಿ ಬಂಜಾರಾ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅಪಾರ ಶ್ರಮ ವಹಿಸಿದ್ದರು. ಸಮಾಜದಲ್ಲಿ ಜಾಗೃತಿ ಮೂಡಿಸಿ ಅನಕ್ಷರತೆ ಅಳಿಸಲು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದ್ದರು. ಸಮಾಜದ ಜನ ನೆಲೆಸುವ ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ಗೌರವಪೂರ್ವಕವಾಗಿ ಬದುಕುವುದನ್ನು ಕಲಿಸಿಕೊಟ್ಟರು. ಅವರ ಮಾರ್ಗದರ್ಶನದಿಂದಲೇ ನಮ್ಮ ಸಮಾಜವನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದರು. ಬಂಜಾರಾ ಭಾಷೆಗೆ ಈಗಲೂ ಲಿಪಿಯಿಲ್ಲ, ಕೇವಲ ಭಾಷೆಯ ಮೂಲಕವೇ ಸದ್ಗುರುಗಳು ತಮ್ಮ ಸಂದೇಶಗಳನ್ನು ಸಾರುತ್ತಿದ್ದರು. ಅವರ ತೀಕ್ಷ್ಣವಾದ ಸಂದೇಶಗಳು ಬಂಜಾರಾ ಸಮುದಾಯದವರಿಗೆ ವೇದವಾಕ್ಯಗಳಾಗಿದ್ದವು.

ADVERTISEMENT

ಇಂತಹ ಸದ್ಗುರುಗಳ ಆಶೀರ್ವಾದ ಸದಾ ಸಮಾಜದ ಮೇಲಿರಲಿ ಎನ್ನುವ ಉದಾತ್ತ ಧ್ಯೇಯದೊಂದಿಗೆ 10 ರಂದು ಸಂಜೆ ಆರಂಭಗೊಂಡು ರಾತ್ರಿಯಿಡೀ ಭಜನೆ, ಕೀರ್ತನೆ, ಅವರ ಸಂದೇಶಗಳ ಪಾರಾಯಣ ನಡೆಯಲಿದೆ.

11 ರಂದು ಬೆಳಿಗ್ಗೆ 9ಕ್ಕೆ ರಾಮರಾವ್ ಮಹಾರಾಜರ ಅಸ್ಥಿ ಪೂಜೆ, 11 ಗಂಟೆಗೆ ಗೋಮಾತಾ ಪೂಜೆ, 11.30ಕ್ಕೆ ರಾಮರಾವ್ ಮಹಾರಾಜರ ಸ್ಮರಣಾರ್ಥ ಸಸಿ ನೆಡುವ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ರಾಮರಾವ್ ಮಹಾರಾಜ್ ಅವರ ಮಂದಿರದ ಭೂಮಿ ಪೂಜೆ ನಂತರ 12.30ಕ್ಕೆ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.