ADVERTISEMENT

ಸಮಾಜಕ್ಕೆ ರಾಮಾಯಣ ದಾರಿದೀಪ

ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಶಿವಾಚಾರ್ಯರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 8:53 IST
Last Updated 17 ಏಪ್ರಿಲ್ 2021, 8:53 IST
ಹುಮನಾಬಾದ್ ತಾಲ್ಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಹಾಗೂ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು
ಹುಮನಾಬಾದ್ ತಾಲ್ಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಹಾಗೂ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು   

ಹುಮನಾಬಾದ್: ‘ಜಾತಿ, ಧರ್ಮಗಳ ಹೆಸರಿನಲ್ಲಿ ಸಂಬಂಧಗಳು ಕುಸಿಯುತ್ತಿ ರುವ ಪ್ರಸ್ತುತ ದಿನಗಳಲ್ಲಿ ರಾಮಾಯಣ ಮಾಹಾಕಾವ್ಯ ದಾರಿದೀಪವಾಗಿ ತೋರುತ್ತದೆ’ ಎಂದು ಹಾರಕೂಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಸಮುದಾಯಗಳ ಸಮಸ್ಯೆ, ಸಂಕಟ, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಇದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಾಹಾಕಾವ್ಯದಿಂದ ನಾವು ಕಲಿಯಬಹುದು’ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆ.ಅದರಲ್ಲಿ ಭರತಖಂಡದಲ್ಲಿನ ಅರಣ್ಯ, ಪರ್ವತ, ನದಿ, ಸರೋವರ, ಸಮುದ್ರ ಮತ್ತು ಪ್ರಕೃತಿ ಸೌಂದರ್ಯವನ್ನು ವರ್ಣಿಸಲಾಗಿದೆ. ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ, ಸಮುದ್ರ, ನದಿಗಳು ಇರುತ್ತವೆಯೋ ಅಲ್ಲಿಯವರೆಗೆ ರಾಮಾಯಣ ಕಾವ್ಯ ಲೋಕದ ಪ್ರಚಲಿತದಲ್ಲಿ ಇರುತ್ತದೆ’ ಎಂದು ಹೇಳಿದರು.

ಜಯಶಾಂತಲಿಂಗ ಮಾಹಾ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮಲ್ಲಣ ಮಾಹಾಸ್ವಾಮಿ, ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಚಾರ್ಯರು, ದತ್ತಾತ್ರೇಯ ಗುರೂಜಿ, ಗೋದಾವರಿ ತಾಯಿ, ಶಾರದಾಬಾಯಿ ತಾಯಿ ಹಾಗೂ ಮುಖಂಡರಾದ ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಮಣರಾವ ಬುಳ್ಳಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಪುರಸಭೆ ಸದಸ್ಯ ಅನೀಲ್ ಪಲ್ಲರಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಲೇಮಾ ಭದ್ರಪ್ಪ, ಗ್ರಾ.ಪಂ ಸದಸ್ಯರಾದ ಅಶೋಕ, ಶರಣಪ್ಪ, ಮಲ್ಲಿಕಾರ್ಜುನ, ವಾಲ್ಮೀಕಿ ಕಮಿಟಿ ಅಧ್ಯಕ್ಷ ರಾಮಚಂದ್ರ, ಬಲವಂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.