ಬೀದರ್: ಜಿಲ್ಲೆಯಲ್ಲಿ ಒಂದೂವರೆ ತಿಂಗಳಿಂದ ಆಗಾಗ್ಗೆ ಸುರಿದ ಮಳೆಯಿಂದಾಗಿ ಭೂಮಿ ಹಸಿರಾಗುತ್ತಿದೆ. ಕುರುಚಲು ಅರಣ್ಯದಲ್ಲಿ ಚೆನ್ನಾಗಿ ಹುಲ್ಲು ಬೆಳೆದಿರುವುದರಿಂದ ನೆರೆಯ ರಾಜ್ಯಗಳಿಂದ ನೀಲಗಾಯ್‌ಗಳು ಆಹಾರ ಹುಡುಕಿಕೊಂಡು ಜಿಲ್ಲೆಯ ಔರಾದ್ ಹಾಗೂ ಕಮಲನಗರ ತಾಲ್ಲೂಕಿನತ್ತ ಬರುತ್ತಿವೆ.
ಗದ್ದೆಗಳಲ್ಲಿ ನೀಲಗಾಯ್‌ಗಳನ್ನು ಕಂಡು ಕೆಲವರು ಭಯದಿಂದ ಊರು ಸೇರಿದ್ದು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಒಂದು ತಿಂಗಳಿಂದ ಪರಿಶೀಲನೆ ನಡೆಸಿ ‘ಅವು ಹುಲ್ಲುಗಾವಲು ಪ್ರದೇಶದಲ್ಲಿ ಕಂಡು ಬರುವ ನೀಲಗಾಯ್‌ಗಳು, ಆತಂಕ ಬೇಡ’ ಎಂದು ಖಚಿತ ಪಡಿಸಿದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ.
ಹದಿನೈದು ದಿನಗಳ ಅವಧಿಯಲ್ಲಿ ಎರಡು ಹಿಂಡುಗಳಲ್ಲಿ ಒಟ್ಟಾರೆ 37 ನೀಲಗಾಯ್‌ಗಳು ಕಾಣಿಸಿಕೊಂಡಿವೆ. ಒಂದು ಹಿಂಡಿನಲ್ಲಿ ಎರಡು ಗಂಡು, 11 ಹೆಣ್ಣು ಹಾಗೂ ಎರಡು ಮರಿಗಳು ಇದ್ದರೆ, ಇನ್ನೊಂದು ಹಿಂಡಿನಲ್ಲಿ 9 ಗಂಡು, 10 ಹೆಣ್ಣು ಹಾಗೂ ಮೂರು ಮರಿಗಳು ಇವೆ. ಹವ್ಯಾಸಿಛಾಯಾಗ್ರಾಹಕರಾದವಿವೇಕ ಹಾಗೂ ಜ್ಯೋತಿ ಬಿರಾದಾರ ಅವರು ಎರಡೂ ಹಿಂಡುಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
‘ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್‌ಗಳಲ್ಲಿ ಹೆಚ್ಚಾಗಿ ಕಂಡು ಬರುವ ನೀಲಗಾಯ್‌ಗಳು ಹುಲ್ಲುಗಾವಲು ಪ್ರದೇಶದಲ್ಲಿ ವಾಸ ಮಾಡುತ್ತವೆ. ಒಂದು ಪ್ರದೇಶದಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ. ಆಹಾರ ಸೇವಿಸುತ್ತ, ಅರಸುತ್ತ ಮುಂದೆ ಸಾಗುತ್ತವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪೆರ್ನಲ್ ಶಿವಶಂಕರ ಎಸ್. ತಿಳಿಸಿದರು.
‘ಮೈಸೂರು, ಬೆಳಗಾವಿ ಸೇರಿದಂತೆ ಕೆಲ ಮೃಗಾಲಯಗಳಲ್ಲಿ ನೀಲಗಾಯ್‌ಗಳು ಇವೆ. ಚಿಂಚೋಳಿಯ ಅರಣ್ಯದಲ್ಲಿ ಎರಡು ನೀಲಗಾಯ್‌ಗಳು ಇರುವ ಮಾಹಿತಿ ಇದೆ. ಸದ್ಯ ರಾಜ್ಯದಲ್ಲಿ ಇಷ್ಟು ದೊಡ್ಡ ಸಂಖ್ಯೆ
ಯಲ್ಲಿ ನೀಲಗಾಯ್‌ಗಳು ಕಂಡು ಬಂದಿರುವುದು ಬೀದರ್ ಜಿಲ್ಲೆಯಲ್ಲಿಯೇ’ ಎಂದು ಹೇಳಿದರು.
ಜಿಲ್ಲೆಯಲ್ಲಿ 2012ರಲ್ಲಿ ಎರಡು ನೀಲಗಾಯ್‌ಗಳು ಕಂಡುಬಂದಿದ್ದವು. 2014ರಲ್ಲಿ ಅಪಘಾತದಲ್ಲಿ ಪೆಟ್ಟುಬಿದ್ದಿದ್ದ ನೀಲಗಾಯ್‌ಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಅರಣ್ಯ ಇಲಾಖೆಯಲ್ಲಿ ಈ ಕುರಿತ ದಾಖಲೆಗಳಿಲ್ಲ.
‘ಗಂಡು ನೀಲಗಾಯ್ ನೋಡಿದ ನಂದಿ ಬಿಜಲಗಾಂವ್ ಗ್ರಾಮಸ್ಥರೊಬ್ಬರು ಕಾಡಿನಲ್ಲಿ ಹುಲಿ ಬಂದಿದೆ ಎಂದು ತಿಳಿಸಿದ್ದರು. ಪೊಲೀಸರಿಗೂ ಮಾಹಿತಿ ಮುಟ್ಟಿಸಿದರು. ಕೆಲವರು ವಿಚಿತ್ರ ಪ್ರಾಣಿಯೊಂದು ಬಂದಿದೆ ಎಂದು ಸುದ್ದಿ ಹಬ್ಬಿಸಿದರು. ನೀಲಗಾಯ್ ಇರುವುದು ಗೊತ್ತಿದ್ದ ಕಾರಣ ಅವರಿಗೆ ತಿಳಿವಳಿಕೆ ನೀಡಿದೆ’ ಎಂದು ಆರ್‌ಎಫ್‌ಒ ಪ್ರೇಮಶೇಖರ ಹೇಳಿದರು.
‘ನೀಲಗಾಯ್ ಹಿಂಡುಗಳು ನೆರೆಯ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಗಡಿಯೊಳಗೂ ಸಂಚರಿಸುತ್ತಿವೆ. ಉದಗಿರ ಹಾಗೂ ಚೊಂಡಿಮುಖೇಡ ಪರಿಸರದಲ್ಲಿ ಸಂಚರಿಸಿದ ಮಾಹಿತಿ ಇದೆ. ಇವು ಸಾಧುಪ್ರಾಣಿ. ಮನುಷ್ಯರಿಗೆ ಅದರಿಂದ ಅಪಾಯ ಇಲ್ಲ. ಗ್ರಾಮ ಪಂಚಾಯಿತಿಗಳ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.