ಬೀದರ್: ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡವು ಐಪಿಎಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸಿದ ನಂತರ ನೂರಾರು ಜನ ಮಧ್ಯರಾತ್ರಿ ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಜಯ ಖಚಿತವಾಗುತ್ತಿದ್ದಂತೆ ಆಕಾಶವೆಲ್ಲ ಪಟಾಕಿಗಳ ಚಿತ್ತಾರದಿಂದ ಬೆಳಗಿತು. ಎಲ್ಲ ಕಡೆ ಪಟಾಕಿಗಳ ಸದ್ದು, ಬಾನಲ್ಲಿ ಬೆಳಕು ಹರಡಿತು. ಎಲ್ಲೆಡೆ ಶಿಳ್ಳೆ, ಕೇಕೆ ಹಾಕಿ ಅಭಿಮಾನ ತೋರಿದರು.
‘ಈ ಸಲ ಕಪ್ ನಮ್ದು’ ಎಂದು ಜಯಘೋಷ ಹಾಕುತ್ತ ನಗರದಲ್ಲಿ ಸುತ್ತಾಡಿದರು. ಕನ್ನಡದ ಧ್ವಜ, ಆರ್‌ಸಿಬಿ ತಂಡದ ಧ್ವಜ, ಟೀ ಶರ್ಟ್ ಧರಿಸಿಕೊಂಡು ಕುಣಿದು ಕುಪ್ಪಳಿಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್, ವೃತ್ತ, ಬಸವೇಶ್ವರ ವೃತ್ತದಲ್ಲಿ ನೂರಾರು ಜನ ಸೇರಿ ಸಂಭ್ರಮಾಚರಣೆ ಮಾಡಿದರು. ಮಧ್ಯರಾತ್ರಿ 12ರ ಸುಮಾರಿಗೆ ಆರಂಭಗೊಂಡ ಸಂಭ್ರಮ, ತಡರಾತ್ರಿ 2ರ ವರೆಗೆ ನಡೆಯಿತು.
ನಗರದ ಹೋಟೆಲ್, ರೆಸ್ಟೊರೆಂಟ್ ಹಾಗೂ ಪಬ್‌ಗಳಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಕೆಲವರು ಸ್ನೇಹಿತರೊಂದಿಗೆ ಪಂದ್ಯ ವೀಕ್ಷಿಸಿದರು. ಮತ್ತೆ ಕೆಲವರು ಸ್ನೇಹಿತರು, ಸಂಬಂಧಿಕರ ಜೊತೆಯಲ್ಲಿ ಮನೆಯಲ್ಲಿ ಕುಳಿತು ನೋಡಿದರು. ಆರ್‌ಸಿಬಿ ಗೆದ್ದ ನಂತರ ಎಲ್ಲರೂ ಹೊರಗೆ ಬಂದು ಸಂಭ್ರಮಿಸಿದರು.
ಸಮಯ ಮೀರುತ್ತಿದ್ದಂತೆ ಅಂಬೇಡ್ಕರ್, ಬಸವೇಶ್ವರ ವೃತ್ತದಲ್ಲಿ ಜನದಟ್ಟಣೆ ಅಧಿಕವಾಯಿತು. ಕೆಲವರು ಪಟಾಕಿ ಸಿಡಿಸಿದರೆ, ಕೆಲವರು ಸಿಹಿ ಹಂಚಿದರು. ಜಯಘೋಷ ಹಾಕಿ ಕುಣಿದು ಕುಪ್ಪಳಿಸಿದರು. ಇನ್ನು, ಬಡಾವಣೆಗಳಲ್ಲಿ ಸಂಗೀತ ಹಾಕಿ ಯುವಕ, ಯುವತಿಯರು, ಚಿಣ್ಣರು ಮೈಮರೆತು ಕುಣಿದರು. ಆರ್‌ಸಿಬಿ, ಆರ್‌ಸಿಬಿ, ಕೊಹ್ಲಿ, ಕೊಹ್ಲಿ ಎಂದು ಹೇಳುತ್ತ ಹೆಜ್ಜೆ ಹಾಕಿದರು. ಜಿಲ್ಲೆಯ ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲೂ ಇದೇ ಪರಿಸ್ಥಿತಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.