ADVERTISEMENT

ಚೌಕಿಮಠ ಉತ್ತರಾಧಿಕಾರಿ ಪುರಪ್ರವೇಶ ಇಂದು

ಮಾಣಿಕ ಆರ್ ಭುರೆ
Published 5 ಆಗಸ್ಟ್ 2022, 2:57 IST
Last Updated 5 ಆಗಸ್ಟ್ 2022, 2:57 IST
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಗುರುವಾರ ಮಲ್ಲಿಕಾರ್ಜುನ ದೇವರನ್ನು ಸ್ವಾಗತಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಗುರುವಾರ ಮಲ್ಲಿಕಾರ್ಜುನ ದೇವರನ್ನು ಸ್ವಾಗತಿಸಲಾಯಿತು   

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮಂಠಾಳದಲ್ಲಿ ಶುಕ್ರವಾರ ಚೌಕಿ ಮಠದ ನಿಯೋಜಿತ ಉತ್ತರಾಧಿಕಾರಿ ಮಲ್ಲಿಕಾರ್ಜುನ ದೇವರ ಪುರ ಪ್ರವೇಶ ಕಾರ್ಯಕ್ರಮ ಜರುಗಲಿದೆ.

ಮಂಠಾಳ ಗ್ರಾಮದಲ್ಲಿ ನೂರಾರು ಮಠಗಳಿವೆ. ಈ ಕಾರಣವೇ ಊರಿಗೆ ಮಂಠಾಳ ಎಂಬ ಹೆಸರು‌ ಬಂದಿದೆ. ಈಗ ಸುಸ್ಥಿತಿಯಲ್ಲಿರುವ ಮಠಗಳಲ್ಲಿ ಗುರುಲಿಂಗೇಶ್ವರ ವಿರಕ್ತಮಠವು ಇಲ್ಲಿನ‌ ಪ್ರಸಿದ್ಧ ಮಠವಾಗಿದ್ದು ಇದು ಚೌಕಿ ಮಠ ಎಂದೇ ಪ್ರಸಿದ್ಧವಾಗಿದೆ. ಈ ಮಠವನ್ನು ಮೂರು ದಶಕಗಳವರೆಗೆ ಮುನ್ನಡೆಸಿದ್ದ ಗುಹೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ವರ್ಷದಿಂದ ಪೀಠಾಧಿಪತಿ‌ ಸ್ಥಾನ ಖಾಲಿ ಉಳಿದಿತ್ತು. ಆದ್ದರಿಂದ ಮಲ್ಲಿಕಾರ್ಜುನ ದೇವರನ್ನು ಈ‌‌ ಸ್ಥಾನದಲ್ಲಿ ನಿಯೋಜಿಸಲಾಗುತ್ತಿದೆ.

ಈ ಮಠಕ್ಕೆ ಗುರುಲಿಂಗ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಗುಹೇಶ್ವರ ಸ್ವಾಮೀಜಿ ಪೀಠಾಧಿಪತಿ ಆಗಿದ್ದರು. ನಾಲ್ಕನೇಯವರಾಗಿ ಮಲ್ಲಿಕಾರ್ಜುನ ದೇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಮಠಕ್ಕೆ ಬಂದ ನಂತರ ಕೆಲ ಕಾಲದ ನಂತರ ಪಟ್ಟಾಧಿಕಾರ‌ ಮಹೋತ್ಸವ ಜರುಗಲಿದೆ‌.

ADVERTISEMENT

ಮಲ್ಲಿಕಾರ್ಜುನ ಸ್ವಾಮೀಜಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗೌಡನಳ್ಳಿ ಗ್ರಾಮದವರು. 24 ವರ್ಷ ವಯಸ್ಸಿನವರಾಗಿದ್ದು ಪದವಿ ಶಿಕ್ಷಣ ‌ಪಡೆದಿದ್ದಾರೆ. ಸಂಸ್ಕೃತ ಅಧ್ಯಯನ‌ಗೈದಿದ್ದಾರೆ. ಧರ್ಮ ಬೋಧನೆ, ಪ್ರವಚನಗೈಯುತ್ತಾರೆ.

ಬೆಳಿಗ್ಗೆ 11ಕ್ಕೆ ಯಲ್ಲಾಲಿಂಗೇಶ್ವರ ಮಠದಿಂದ ಚೌಕಿ ಮಠದವರೆಗೆ ಸಾರೋಟದಲ್ಲಿ ಮೆರವಣಿಗೆ ‌ಮೂಲಕ ಕರೆ ತರಲಾಗುತ್ತದೆ. ಡೊಳ್ಳು ಕುಣಿತ, ಬ್ಯಾಂಡ್‌ಬಾಜಾ ಹಾಗೂ ಇತರೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಲಿದೆ. ಮಹಿಳೆಯರು ಕುಂಭ ಕಳಸ ಹೊತ್ತು ಪಾಲ್ಗೊಳ್ಳುವರು.

ಮಧ್ಯಾಹ್ನ 1ಕ್ಕೆ ಮಹಾದೇವ ಮಂದಿರದಲ್ಲಿ‌ ಧರ್ಮ‌ ಸಭೆ ನಡೆಯಲಿದೆ. ಹುಲಸೂರ ‌ಶಿವಾನಂದ‌‌ ಸ್ವಾಮೀಜಿ, ಬೇಲೂರ ಪ್ರಭುಕುಮಾರ ದೇವರು, ಖೇಳಗಿ ಶಿವಲಿಂಗೇಶ್ವರ ಸ್ವಾಮೀಜಿ, ಸ್ವಂತ ಶಿವಕುಮಾರ ಶಿವಾಚಾರ್ಯರು‌ ನೇತೃತ್ವ ವಹಿಸುವರು.

ಶಾಸಕರಾದ ಶರಣು ಸಲಗರ, ರಾಜಶೇಖರ ಪಾಟೀಲ ಹುಮನಾಬಾದ್, ವಿಧಾನ ಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್‌ ಪಾಲ್ಗೊಳ್ಳುವರು. ದಾಸೋಹ ಕೂಡ ಏರ್ಪಡಿಸಲಾಗಿದೆ.

ಮಠದಲ್ಲಿ ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದೆ. ಈ‌ ಸಂಬಂಧ ನಡೆದ ಸಭೆಯಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಪೋಲಿಸ್ ಪಾಟೀಲ, ಶಿವಕುಮಾರ ಶೆಟಗಾರ, ಮಹಾದೇವ ಪೊಲೀಸ್ ಪಾಟೀಲ, ರವೀಂದ್ರ ಶಾಯಪ್ಪ, ಸಂಗಪ್ಪ‌ ಸಜ್ಜನಶೆಟ್ಟಿ, ಬಂಡೆಪ್ಪ ಮಾಳಿ, ಅರುಣಕುಮಾರ ಮಸ್ಗಲ್ಲೇ, ಉಮಾಕಾಂತ ಪಾಟೀಲ, ಸಂಗಪ್ಪ ವಗಶೆಟ್ಟೆ, ಶೇಖರ ಝಂಜಾ, ಧನರಾಜ ಸಾತಬಾಯ, ಚಂದ್ರಕಾಂತ ಹುಗ್ಗೆ ಪಾಟೀಲ್, ಸಂತೋಷ ಸಂಗನಬಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.