ADVERTISEMENT

ಭಾಲ್ಕಿ: ಕೋವಿಡ್ ಮಾರ್ಗಸೂಚಿಯಂತೆ ಪುಣ್ಯಸ್ಮರಣೆ

ಡಾ.ಚನ್ನಬಸವ ಪಟ್ಟದ್ದೇವರ 22ನೇ ಪುಣ್ಯಸ್ಮರಣೆ, ವಚನ ಜಾತ್ರೆ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 3:50 IST
Last Updated 16 ಏಪ್ರಿಲ್ 2021, 3:50 IST
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವ ಸಾನ್ನಿಧ್ಯದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 22ನೇ ಪುಣ್ಯ ಸ್ಮರಣೆ ನಿಮಿತ್ತ ಪೂರ್ವಭಾವಿ ಸಭೆ ಜರುಗಿತು
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವ ಸಾನ್ನಿಧ್ಯದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ 22ನೇ ಪುಣ್ಯ ಸ್ಮರಣೆ ನಿಮಿತ್ತ ಪೂರ್ವಭಾವಿ ಸಭೆ ಜರುಗಿತು   

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಗುರುವಾರ ಡಾ.ಚನ್ನಬಸವ ಪಟ್ಟದ್ದೇವರ 22ನೇ ಪುಣ್ಯಸ್ಮರಣೆ ಮತ್ತು ವಚನ ಜಾತ್ರೆ-2021 ನಿಮಿತ್ತ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಭಕ್ತರು, ‘ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಅನೇಕ ವಿಧಾಯಕ ಕಾರ್ಯಗಳ ಮೂಲಕ ಈ ಭಾಗಕ್ಕೆ ಕೊಡುಗೆ ನೀಡಿದ್ದಾರೆ. ಶ್ರೀಮಠದಿಂದ ಕಳೆದ 20 ವರ್ಷಗಳಿಂದ ಪಟ್ಟದ್ದೇವರ ಜಯಂತ್ಯುತ್ಸವ, ಪುಣ್ಯಸ್ಮರಣೆ ಆಚರಣೆ ಮೂಲಕ ಅವರ ಚಿಂತನೆ, ಆದರ್ಶಗಳನ್ನು ಭಕ್ತ ಸಮೂಹಕ್ಕೆ ಪರಿಚಯಿಸುವ ಕೆಲಸ ಮಾಡಿಕೊಡಲಾಗುತ್ತಿದೆ. ಆದರೆ, ಕಳೆದ ವರ್ಷ ಕೋವಿಡ್ ಸೋಂಕು ಹರಡುವಿಕೆ ಭೀತಿಯಿಂದ ಲಾಕ್‍ಡೌನ್ ಪ್ರಯುಕ್ತ ಪಟ್ಟದ್ದೇವರ ಪುಣ್ಯಸ್ಮರಣೆ ರದ್ದುಗೊಂಡಿತು. ಪ್ರಸ್ತುತ ವರ್ಷ ಪಟ್ಟದ್ದೇವರ ಸ್ಮರಣೋತ್ಸವ ರದ್ದು ಪಡಿಸುವುದು ಬೇಡ. ಕೋವಿಡ್ ನಿಯಮದಂತೆ ಸರಳವಾಗಿ ಆಚರಣೆ ಮಾಡುವಂತೆ’ ಮನವಿ ಮಾಡಿದರು.

ಭಕ್ತರ ಸಲಹೆ, ಸೂಚನೆ ಆಲಿಸಿದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಏ.22ರಂದು ಬೆಳಿಗ್ಗೆ 6ಕ್ಕೆ ಪಟ್ಟಣದಲ್ಲಿ ಪ್ರಭಾತ ಫೇರಿ, ಸಂಜೆ 7ಕ್ಕೆ ಚನ್ನಬಸವಾಸಶ್ರಮ ಪರಿಸರದ ಬಯಲು ಪ್ರದೇಶದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಪಟ್ಟದ್ದೇವರ ಪುಣ್ಯಸ್ಮರಣೆಯನ್ನು 20 ವರ್ಷಗಳಿಂದ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಪ್ರಸ್ತುತ ವರ್ಷ ಕೋವಿಡ್ ಸೋಂಕು ಹರಡುವಿಕೆ ವೇಗ ಹೆಚ್ಚಿದ್ದು, ಆತಂಕ ಎದುರಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತೆ ವಹಿಸಿ ಸರಳವಾಗಿ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಿಸಲಾಗುವುದು’ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲ್ಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಪ್ರಾಚಾರ್ಯ ಅಶೋಕ ರಾಜೋಳೆ, ಮಹಾನಂದಾ ಮಾಶೆಟ್ಟೆ ಅವರು ಶ್ರೀಗಳ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.

ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಸೋಮನಾಥಪ್ಪ ಅಷ್ಟೂರೆ, ಶರಣಪ್ಪ ಬಿರಾದಾರ, ಗಣಪತಿ ಬೋಚರೆ, ವಿಜಯಕುಮಾರ ಪಾಟೀಲ, ಶಿವಪುತ್ರ ಕಲ್ಯಾಣೆ, ಸುರೇಶ ಪುರವಂತ, ಬಾಬು ಬೆಲ್ದಾಳ, ರೇಖಾಬಾಯಿ ಅಷ್ಟೂರೆ, ಡಾ.ಎಂ.ಮಕ್ತುಂಬಿ ಇದ್ದರು. ವೀರಣ್ಣ ಕುಂಬಾರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.