ADVERTISEMENT

ರಸ್ತೆ ದುರಸ್ತಿಪಡಿಸಿ ಬೀದರ್ ಉತ್ಸವ ಆಚರಿಸಿ: ಸೋಮನಾಥ ಮುಧೋಳ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 12:54 IST
Last Updated 2 ಡಿಸೆಂಬರ್ 2022, 12:54 IST
ಸೋಮನಾಥ ಮುಧೋಳ
ಸೋಮನಾಥ ಮುಧೋಳ   

ಬೀದರ್‌: ನಗರದಲ್ಲಿನ ರಸ್ತೆಗಳನ್ನು ದುರಸ್ತಿಪಡಿಸಿ ಬೀದರ್ ಉತ್ಸವ ಆಚರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದ್ದಾರೆ.

ಮಳೆಯ ಕಾರಣ ನಗರದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ನಿರಂತರ ನೀರು ಪೂರೈಕೆ ಯೋಜನೆಗಾಗಿಯೂ ಅನೇಕ ರಸ್ತೆಗಳನ್ನು ಅಗೆಯಲಾಗಿದೆ. ಹೀಗಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಗೆದ ರಸ್ತೆಗಳಲ್ಲಿ ದೂಳು ಏಳುತ್ತಿದ್ದು, ಪ್ರಯಾಣಿಕರಿಗೆ ನಿತ್ಯ ದೂಳಿನ ಸ್ನಾನ ಆಗುತ್ತಿದೆ ಎಂದು ಹೇಳಿದ್ದಾರೆ.

ಎಲ್ಲವೂ ಸುಸೂತ್ರ ಹಾಗೂ ಸಮೃದ್ಧವಾಗಿದ್ದಾಗ ಉತ್ಸವ ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಆದರೆ, ಜಿಲ್ಲೆಯಲ್ಲಿ ನೂರೆಂಟು ಸಮಸ್ಯೆಗಳು ಇವೆ. ಕಾರಂಜಾ ಮುಳುಗಡೆ ಸಂತ್ರಸ್ತರು ಹಾಗೂ ಆರೋಗ್ಯ ಇಲಾಖೆ ಹೊರ ಹೊತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗಾಗಿ ಐದಾರು ತಿಂಗಳಿಂದ ಅನಿರ್ದಿಷ್ಟಾವಧಿ ಧರಣಿಯಲ್ಲಿ ನಿರತರಾಗಿದ್ದಾರೆ. ಬೆಳೆ ಹಾನಿ ಪರಿಹಾರ ಸಿಗದೆ ರೈತರು ಕಷ್ಟದಲ್ಲಿ ಇದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಉತ್ಸವ ಆಚರಿಸುತ್ತಿರುವುದಾದರೂ ಯಾರಿಗಾಗಿ ಎಂದು ಪ್ರಶ್ನಿಸಿದ್ದಾರೆ.

ಸದ್ಯದ ಸಂದರ್ಭದಲ್ಲಿ ಉತ್ಸವ ಆಚರಿಸಿದರೆ ವಿವಿಧೆಡೆಯಿಂದ ಬರುವ ಕಲಾವಿದರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಬೀದರ್‍ನ ತಗ್ಗು ದಿನ್ನೆಗಳ ದರ್ಶನ ಆಗಲಿದೆ. ಇದರಿಂದ ಪರಂಪರೆ ನಗರಿಯ ಘನತೆಗೆ ಧಕ್ಕೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೀದರ್ ಉತ್ಸವಕ್ಕೆ ತಮ್ಮ ವೈಯಕ್ತಿಕ ವಿರೋಧವೇನೂ ಇಲ್ಲ. ಆದರೆ, ಕಾರಂಜಾ ಸಂತ್ರಸ್ತರು, ಆರೋಗ್ಯ ಇಲಾಖೆ ಹೊರ ಗುತ್ತಿಗೆ ನೌಕರರು, ರೈತರ ಸಮಸ್ಯೆಗಳನ್ನು ಪರಿಹರಿಸಿ ಉತ್ಸವ ಆಚರಿಸಬೇಕು. ಹಾಗಾದಲ್ಲಿ ಸರ್ವರೂ ಸಂತಸದಿಂದ ಉತ್ಸವದಲ್ಲಿ ಪಾಲ್ಗೊಳ್ಳುವಂತಾಗಲಿದೆ ಎಂದು ಹೇಳಿದ್ದಾರೆ.

ರಸ್ತೆ ದುರಸ್ತಿ ಹಾಗೂ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದೆ ಉತ್ಸವ ನಡೆಸಿದರೆ ಹೋರಾಟ ಮಾಡಲಾಗುವುದು. ನ್ಯಾಯಾಲಯದ ಮೊರೆಯನ್ನೂ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.