ಹುಮನಾಬಾದ್: ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯಾಡಳಿತದ ಕಾರ್ಯವೈಖರಿ ಕುರಿತು ಸ್ಥಳೀಯರು ಬೇಸರಗೊಂಡಿದ್ದಾರೆ.
ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳಿವೆ. ಇವುಗಳನ್ನು ಮೂಲ ಸೌಕರ್ಯ ಕೊರತೆ ಕಾಡುತ್ತಿದೆ.
ಇಲ್ಲಿಯ ಟೀಚರ್ಸ್ ಕಾಲೊನಿಯಲ್ಲಿ ಇಲ್ಲಿಯವರೆಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಪುರಸಭೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೊಳಚೆ ನೀರು ಖಾಲಿ ನಿವೇಶನಗಳಲ್ಲಿ ಸಂಗ್ರಹಗೊಂಡು ಅವು ಸೊಳ್ಳೆ ಉತ್ಪತ್ತಿ ತಾಣವಾಗಳಾಗಿ ಮಾರ್ಪಟ್ಟಿವೆ. ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಸಾರ್ವಜನಿಕ ಶೌಚಾಲಯ ಕೊರತೆ: ಪಟ್ಟಣದಲ್ಲಿ ಶೌಚಾಲಯದ ಸಮಸ್ಯೆ ಇದೆ. 3-4 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಗಳಿದ್ದ ರೂ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ.
ಇವುಗಳ ನಿರ್ವಹಣೆಯ ಜವಾಬ್ದಾರಿ ಪುರಸಭೆ ಮೇಲಿದೆ. ಸ್ವಚ್ಛತೆಗೆ ಮುಂದಾಗದೆ ಇರುವುದು ದುರಂತದ ಸಂಗತಿ.
ಪುರಸಭೆ ಆವರಣದಲ್ಲಿರುವ ಶೌಚಾಲಯ ಸ್ವಚ್ಛತೆಯಿಂದ ದೂರ ಉಳಿದಿದೆ. ಹಲವು ಕೆಲಸಗಳಿಗೆ ಇಲ್ಲಿಗೆ ಬರುವ ಸಾರ್ವಜನಿಕರು ಬಯಲಿನ ಮೊರೆ ಹೋಗುವಂತಾಗಿದೆ. ತಾಲ್ಲೂಕು ಕಚೇರಿ, ನ್ಯಾಯಾಲಯ, ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ಶೌಚಾಲಯ ಇಲ್ಲ.
ತಾಲ್ಲೂಕು ಕಚೇರಿ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿ ಹಲವು ತಿಂಗಳುಗಳೇ ಕಳೆದಿವೆ. ಇಂದಿನ ತಾಲ್ಲೂಕು ಕಚೇರಿಯ ಹಿಂಬದಿಯ ಜಾಗದಲ್ಲಿ ಬಯಲು ಶೌಚಕ್ಕೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.
ಪಾದಚಾರಿ ಮಾರ್ಗದ ಸಮಸ್ಯೆ: ಪಾದಚಾರಿಗಳಿಗೆ ಅನುಕೂಲವಾಗಲೆಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಆದರೆ, ಅದರ ಮೇಲೆ ಕೆಲ ಅಂಗಡಿಗಳು ತಲೆ ಎತ್ತಿದ್ದು, ಆದ್ದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಪಟ್ಟಣಕ್ಕೆ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ಹೋಗುತ್ತಾರೆ. ದಿನವೂ ಸಾವಿರಾರು ವಾಹನಗಳ ಓಡಾಟವಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ಮೇಲೆ ನಡೆದು ಹೋಗುವಂಥ ಅನಿವಾರ್ಯತೆ ಎದುರಾಗಿದೆ ಎಂದು ನಿವಾಸಿ ಶಿವಕುಮಾರ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬಹುತೇಕ ಬಡಾವಣೆಗಳಲ್ಲಿ ಚರಂಡಿಗಳು ಗಬ್ಬು ನಾರುತ್ತಿದೆ. ಕೊಳಚೆ ನೀರು ನಿಂತಲ್ಲಿಯೇ ನಿಂತು. ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿವೆ. ಈ ಚರಂಡಿಯಲ್ಲಿ ಐದಾರು ಹಂದಿಗಳು ಬಂದು ಮತ್ತಷ್ಟು ವಾತಾರಣ ಕೆಡಿಸುತ್ತಿದ್ದು, ಕಾರಣ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ನಿವಾಸಿ ಗಣಪತಿ ಬೇಸರ ವ್ಯಕ್ತಪಡಿಸುತ್ತಾರೆ.
ಟೀಚರ್ಸ್ ಬಡಾವಣೆಯಲ್ಲಿ ಚರಂಡಿ ಮತ್ತು ಸಿಸಿ ರಸ್ತೆಯ ಸಮಸ್ಯೆ ಇದೆ. ಚರಂಡಿಯ ಕೊಳಚೆ ನೀರು ಮನೆಯ ಮುಂದೆ ನಿಲ್ಲುತ್ತಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.ಶಾಂತವೀರ ಟೀಚರ್ಸ್ ಕಾಲೊನಿ ನಿವಾಸಿ
ಸಾರ್ವಜನಿಕರು ತಮ್ಮ ಮನೆಯ ಕಸ ತಂದು ರಸ್ತೆಗಳ ಮೇಲೆ ಎಸೆಯಬಾರದು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಚರಂಡಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಟೀಚರ್ಸ್ ಕಾಲೊನಿಯಲ್ಲಿಯೂ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದುಫಿರೋಜ್ ಖಾನ್ ಪುರಸಭೆ ಮುಖ್ಯಾಧಿಕಾರಿ ಹುಮನಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.