ADVERTISEMENT

ಸಂಘದ ಬೇಡಿಕೆಗೆ ಸ್ಪಂದನೆ: ನೌಕರರಿಗೆ ಶೇ 2.75 ರಷ್ಟು ತುಟ್ಟಿ ಭತ್ಯೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 12:31 IST
Last Updated 5 ಏಪ್ರಿಲ್ 2022, 12:31 IST

ಬೀದರ್: ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗೆ ಸ್ಪಂದಿಸಿ ನೌಕರರಿಗೆ ಶೇ 2.75 ರಷ್ಟು ತುಟ್ಟಿ ಭತ್ಯೆ ಮಂಜೂರು ಮಾಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.

ಬಾಕಿ ತುಟ್ಟಿ ಭತ್ಯೆ ಬಿಡುಗಡೆಗಾಗಿ ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತ್ತು. ಅದನ್ನು ಮನ್ನಿಸಿ ಅವರು ಕೇಂದ್ರದ ಮಾದರಿಯಲ್ಲೇ 2022ರ ಜನವರಿ 1 ರಿಂದ ಅನ್ವಯಿಸುವಂತೆ ರಾಜ್ಯದ 5.40 ಲಕ್ಷ ಸರ್ಕಾರಿ ನೌಕರರಿಗೆ ಶೇ 2.75 ರಷ್ಟು ತುಟ್ಟಿ ಭತ್ಯೆ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರು ಏಳನೇ ವೇತನ ಆಯೋಗಕ್ಕೆ ಸಮಿತಿ ರಚನೆ, ಕೇಂದ್ರಕ್ಕೆ ಸರಿಸಮನಾದ ವೇತನ ಕೊಡುವ ಭರವಸೆ ನೀಡುವ ಮೂಲಕ ರಾಜ್ಯ ಸರ್ಕಾರಿ ನೌಕರರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಬಾಕಿ ತುಟ್ಟಿ ಭತ್ಯೆ ಮಂಜೂರು ಮಾಡಿದ ಮುಖ್ಯಮಂತ್ರಿ, ಇದಕ್ಕೆ ಪರಿಶ್ರಮ ವಹಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆ ಅರ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಶೀಘ್ರ ಆದೇಶದ ವಿಶ್ವಾಸ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಖರ ಬಿಸಿಲು ಇರುವ ಕಾರಣ ಬೇಸಿಗೆ ಮಟ್ಟಿಗೆ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡುವಂತೆ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಆದೇಶ ಹೊರ ಬೀಳುವ ಸಾಧ್ಯತೆ ಇದೆ ಎಂದು ಗಂದಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.