ADVERTISEMENT

ಸಾಧಾರಣ ಮಳೆಗೆ ಹಾಳಾದ ಬೀದರ್‌ ರಿಂಗ್‌ರೋಡ್‌: ಸಾರ್ವಜನಿಕರ ಹಿಡಿಶಾಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಜುಲೈ 2024, 5:59 IST
Last Updated 29 ಜುಲೈ 2024, 5:59 IST
ಮೈಲೂರ್‌–ಗುಂಪಾ ಸಂಪರ್ಕ ಸಾಧಿಸುವ ರಿಂಗ್‌ರೋಡ್‌ನಲ್ಲಿ ಬಿದ್ದಿರುವ ಗುಂಡಿಗಳಿಗೆ ತೇಪೆ ಹಚ್ಚಿರುವುದು
ಮೈಲೂರ್‌–ಗುಂಪಾ ಸಂಪರ್ಕ ಸಾಧಿಸುವ ರಿಂಗ್‌ರೋಡ್‌ನಲ್ಲಿ ಬಿದ್ದಿರುವ ಗುಂಡಿಗಳಿಗೆ ತೇಪೆ ಹಚ್ಚಿರುವುದು   

ಬೀದರ್‌: ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆಯೋ ಅಥವಾ ಗುಂಡಿಗಳ ನಡುವೆ ರಸ್ತೆ ಇದೆಯೋ?!

ನಗರದ ರಿಂಗ್‌ರೋಡ್‌ನಲ್ಲಿ ಒಮ್ಮೆ ಓಡಾಡಿದರೆ ಇಂತಹದೊಂದು ಪ್ರಶ್ನೆ ಸಹಜವಾಗಿ ಎಂತಹವರಲ್ಲೂ ಮೂಡುತ್ತದೆ.

ಮಳೆಗಾಲ ಆರಂಭಗೊಂಡು ಎರಡು ತಿಂಗಳಾಗುತ್ತ ಬಂದಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಉತ್ತಮ ಮಳೆಯಾಗಿದೆ. ಆದರೆ, ಇದುವರೆಗೆ ಭಾರಿ ಮಳೆ ಸುರಿದಿಲ್ಲ. ಕೆಲವೊಮ್ಮೆ ಮಧ್ಯಮ ಪ್ರಮಾಣದ ಮಳೆ ಬಿಟ್ಟರೆ ಜಿಟಿಜಿಟಿಯಾಗಿ ಸುರಿದದ್ದೇ ಹೆಚ್ಚು.

ADVERTISEMENT

ಕಳೆದ ವಾರವಿಡೀ ಜಿಲ್ಲೆಯಾದ್ಯಂತ ಎಡೆಬಿಡದೆ ಜಿಟಿಜಿಟಿ ಮಳೆ ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ವರ್ಷಧಾರೆಯಾಗಿರಲಿಲ್ಲ. ಆದರೆ, ಸಾಧಾರಣಕ್ಕಿಂತ ಸಹಜವಾಗಿ ಸುರಿದ ಮಳೆಗೆ ರಿಂಗ್‌ರೋಡ್‌ ಸಂಪೂರ್ಣ ಹಾಳಾಗಿದೆ. ಆಳುದ್ದದ ಗುಂಡಿಗಳು ಬಿದ್ದಿವೆ. ಇದರೊಂದಿಗೆ ರಿಂಗ್‌ರೋಡ್‌ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಹೋದ ವರ್ಷದ ಮಳೆಗಾಲಕ್ಕೆ ಗುಂಪಾ ರಿಂಗ್‌ರೋಡ್‌ನಿಂದ ಶಹಾಪುರ ಗೇಟ್‌ ವರೆಗೆ ಹಲವು ಕಡೆಗಳಲ್ಲಿ ರಸ್ತೆ ಹಾಳಾಗಿತ್ತು. ಮಳೆಗಾಲಕ್ಕೂ ಮುನ್ನ ಆ ರಸ್ತೆ ದುರಸ್ತಿಗೊಳಿಸಲಾಗಿದೆ. ದೇವ ದೇವ ವನದಿಂದ ಚಿಕ್ಕಪೇಟೆಯ ವರೆಗೂ ರಸ್ತೆ ಉತ್ತಮವಾಗಿಯೇ ಇದೆ. ಆದರೆ, ಅಲಿಯಾಬಾದ್‌ ಮೂಲಕ ನೌಬಾದ್‌ ವೃತ್ತದ ವರೆಗಿನ ರಿಂಗ್‌ರೋಡ್‌ ಸಂಪೂರ್ಣ ಹಾಳಾಗಿದೆ. ಚಿದ್ರಿ ಕ್ರಾಸ್‌ನಿಂದ ಮೈಲೂರ್‌ ಕ್ರಾಸ್‌– ಗುಂಪಾ ಕ್ರಾಸ್‌ ವರೆಗೆ ಇದೇ ಪರಿಸ್ಥಿತಿ ಇದೆ. ಈ ಭಾಗದಲ್ಲಿಯೇ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೆ ಸೇರಿದ ಖಾಸಗಿ ಕಚೇರಿ, ಆರೋಗ್ಯ ಕೇಂದ್ರ ಇದೆ.

ಇಷ್ಟೇ ಅಲ್ಲ, ಚಿದ್ರಿ ಸಮೀಪದಲ್ಲೇ ವಿಮಾನ ನಿಲ್ದಾಣ ಇದೆ. ಹೈದರಾಬಾದ್‌–ಪುಣೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಚಿದ್ರಿ ಮುಖ್ಯ ರಸ್ತೆಯ ಮೂಲಕ ಅನೇಕರು ರಿಂಗ್‌ರೋಡ್‌ಗೆ ಸೇರಿ ನಗರದ ಇತರೆ ಭಾಗಗಳಿಗೆ ಹೋಗುತ್ತಾರೆ. ಆದರೆ, ರಿಂಗ್‌ರೋಡ್‌ ಸಂಪೂರ್ಣ ಹದಗೆಟ್ಟಿರುವ ಕಾರಣ ಸಾರ್ವಜನಿಕರ ಪ್ರಯಾಣ ಕಷ್ಟಕರವಾಗಿದೆ.

ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆಯೋ ಅಲ್ಲೆಲ್ಲ ನಗರಸಭೆಯಿಂದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮರದ ದಿಂಬು, ಕಲ್ಲುಗಳನ್ನು ಇಡಲಾಗಿದೆ. ಕೆಲವೆಡೆ ಒಂದು ಬದಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ವಾಹನಗಳು ಒನ್‌ವೇನಲ್ಲಿ ಎದುರು ಬದುರು ಸಂಚರಿಸುತ್ತಿರುವ ಕಾರಣ ಅಪಘಾತಗಳಿಗೂ ಕಾರಣವಾಗಿದೆ. ಚಿದ್ರಿ ಸಮೀಪ ರಸ್ತೆ ಗುಂಡಿಗಳಲ್ಲಿ ಅಪಾರ ನೀರು ಸಂಗ್ರಹಗೊಂಡಿದ್ದು, ಸ್ಥಳೀಯ ಚಿಣ್ಣರು ಅಲ್ಲಿ ಆಟವಾಡಿ ಮೋಜು ಮಾಡುತ್ತಿದ್ದಾರೆ. ರಸ್ತೆ ಯಾವ ಪರಿ ಹದಗೆಟ್ಟಿದೆ ಎಂಬುದಕ್ಕೆ ಇದು ತಾಜಾ ನಿದರ್ಶನ.

ರಿಂಗ್‌ರೋಡ್‌ ಸಂಪೂರ್ಣವಾಗಿ ಡಾಂಬರ್‌ನಿಂದ ಕೂಡಿದೆ. ಆದರೆ, ಈಗ ಬಿದ್ದಿರುವ ಆಳುದ್ದದ ಗುಂಡಿಗಳನ್ನು ಕಾಂಕ್ರೀಟ್‌, ಸಿಮೆಂಟ್‌ ಸೇರಿಸಿ ಮುಚ್ಚಲಾಗುತ್ತಿದೆ. ಇದಕ್ಕಾಗಿಯೇ ಹಲವೆಡೆ ವಾಹನ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದರಿಂದ ದುರಸ್ತಿ ಕೆಲಸವೂ ಫಲ ಕೊಡುವುದು ಅನುಮಾನ ಎನ್ನುತ್ತಾರೆ ಸಾರ್ವಜನಿಕರು.

‘ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ರಸ್ತೆಗಳು ಪ್ರತಿ ಮಳೆಗಾಲ ಬಂದರೆ ಹಾಳಾಗುತ್ತಿವೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುತ್ತಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳನ್ನು ಒಂದು ಸಲ ನಿರ್ಮಿಸಿದ ನಂತರ ಹಲವು ವರ್ಷಗಳವರೆಗೆ ಸುಸ್ಥಿತಿಯಲ್ಲಿರುತ್ತವೆ. ಆದರೆ, ನಗರದ ಮಧ್ಯ ಭಾಗದಲ್ಲಿರುವ ರಸ್ತೆಗಳೇಕೆ ಗುಣಮಟ್ಟದಿಂದ ಕೂಡಿರುತ್ತಿಲ್ಲ’ ಎಂದು ಚಿದ್ರಿ ನಿವಾಸಿ ರಮೇಶ ಪ್ರಶ್ನಿಸಿದರು.

ನಗರದ ನೌಬಾದ್‌ ವೃತ್ತದಿಂದ ಮಾಧವ ನಗರದ ವರೆಗಿನ ಬೀದರ್‌–ಭಾಲ್ಕಿ ಮುಖ್ಯರಸ್ತೆಯೂ ಹಾಳಾಗಿದೆ. ಶಿವನಗರ, ಪಾಪನಾಶ ಸಮೀಪ ಮುಖ್ಯರಸ್ತೆ ಬಾಯಿ ತೆರೆದಿದೆ. ಪ್ರತಿಷ್ಠಿತ ಬಡಾವಣೆಗಳಿರುವ ಪ್ರದೇಶದಲ್ಲೇ ಈ ಪರಿಸ್ಥಿತಿ ಇದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ರಸ್ತೆಯ ಗೋಳು ಇನ್ನೂ ಬಗೆಹರಿದಿಲ್ಲ. ಇದಕ್ಕೆ ಮುಕ್ತಿ ಯಾವಾಗ ಎಂದು ಜನ ಕೇಳುತ್ತಿದ್ದಾರೆ.

‘ಈ ಹಾಳಾದ ರಸ್ತೆಗಳ ಮೂಲಕವೇ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ನಿತ್ಯ ಓಡಾಡುತ್ತಾರೆ. ಆದರೂ ಅವರು ಕಾಳಜಿ ತೋರಿಸಿ ಅವುಗಳ ದುರಸ್ತಿಗೆ ಕ್ರಮವೇಕೆ ಕೈಗೊಳ್ಳುತ್ತಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ’ ಎನ್ನುತ್ತಾರೆ ಮೈಲೂರ್‌ ನಿವಾಸಿ ಜಾಕಿರ್.

ಮೈಲೂರ್‌ ಸಮೀಪ ರಿಂಗ್‌ರೋಡ್‌ ಉದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ಬ್ಯಾರಿಕೇಡ್‌ಗಳಿಂದ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ
ನಮ್ಮ ಇಲಾಖೆ ವ್ಯಾಪ್ತಿಗೆ ಸೇರಿದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಿಸಲಾಗುತ್ತಿದೆ. ರಿಂಗ್‌ರೋಡ್‌ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
–ಶಿವಶಂಕರ್‌ ಕಾಮಶೆಟ್ಟಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿಡಬ್ಲ್ಯೂಡಿ
ಮಳೆಯಿಂದ ರಿಂಗ್‌ರೋಡ್‌ನಲ್ಲಿ ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆಯೋ ಅವುಗಳನ್ನು ಗುರುತಿಸಿ ಆದ್ಯತೆಯ ಮೇಲೆ ಮುಚ್ಚಲಾಗುತ್ತಿದೆ.
–ಶಿವರಾಜ ರಾಠೋಡ್‌ ಪೌರಾಯುಕ್ತ ಬೀದರ್‌ ನಗರಸಭೆ
ರಿಂಗ್‌ರೋಡ್‌ನಲ್ಲಿ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದರ ಬದಲು ಹೊಸದಾಗಿ ಗುಣಮಟ್ಟದ್ದು ನಿರ್ಮಿಸಬೇಕು.
–ಶಮೀಮ್‌ ಖಾನ್‌ ಮೈಲೂರ್‌ ನಿವಾಸಿ
ರಿಂಗ್‌ರೋಡ್‌ನಲ್ಲಿ ಗುಂಡಿಗಳು ಬಿದ್ದಿರುವುದರಿಂದ ಜನರಿಗೆ ಬಹಳ ತೊಂದರೆ ಆಗುತ್ತಿದೆ. ಆದ್ಯತೆ ಮೇಲೆ ಅದನ್ನು ಸರಿಪಡಿಸುವ ಕೆಲಸವಾಗಬೇಕು.
–ಭೀಮಪ್ಪ ಚಿದ್ರಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.