ADVERTISEMENT

88 ಮಾಲೀಕರಿಗೆ ₹ 27 ಲಕ್ಷ ವಿಮೆ ಪರಿಹಾರ

3,232 ಜಾನುವಾರುಗಳಿಗೆ ಸರ್ಕಾರದಿಂದ ಉಚಿತ ವಿಮೆ

ಚಂದ್ರಕಾಂತ ಮಸಾನಿ
Published 7 ನವೆಂಬರ್ 2019, 20:01 IST
Last Updated 7 ನವೆಂಬರ್ 2019, 20:01 IST
ಜಾನುವಾರುಗಳ ಸಾಂದರ್ಭಿಕ ಚಿತ್ರ
ಜಾನುವಾರುಗಳ ಸಾಂದರ್ಭಿಕ ಚಿತ್ರ   

ಬೀದರ್: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಒಂದು ವರ್ಷದ ಅವಧಿಯಲ್ಲಿ ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಿದ ಪರಿಶಿಷ್ಟ ಜಾತಿ, ಪಂಗಡದ 3,232 ರೈತರಲ್ಲಿ 88 ಮಂದಿಗೆ ವಿಮೆ ಸೌಲಭ್ಯ ದೊರಕಿದೆ.

ಯೋಜನೆಯಡಿ ಸರ್ಕಾರ, ಬೀದರ್‌ ಜಿಲ್ಲೆಗೆ ₹ 97 ಲಕ್ಷ ಬಿಡುಗಡೆ ಮಾಡಿತ್ತು. ಇದರಲ್ಲಿ ಪರಿಶಿಷ್ಟ ಜಾತಿಯ 1,593 ಹಾಗೂ ಪರಿಶಿಷ್ಟ ಪಂಗಡದ 1,639 ಜನರು ಜಾನುವಾರು ವಿಮೆ ಮಾಡಿಸಿದ್ದರು. ಇದಕ್ಕಾಗಿ 94.14 ಲಕ್ಷ ಖರ್ಚಾಗಿದೆ. ಈ ಪೈಕಿ ಪರಿಶಿಷ್ಟ ಜಾತಿಯ 36 ಹಾಗೂ ಪರಿಶಿಷ್ಟ ಪಂಗಡದ 52 ಜನ ಸೇರಿ ಒಟ್ಟು 88 ಫಲಾನುಭವಿಗಳು ₹ 27 ಲಕ್ಷ ವಿಮಾ ಪರಿಹಾರ ಪಡೆದುಕೊಂಡಿದ್ದಾರೆ.

ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಬೀದರ್‌ ಜಿಲ್ಲೆಯಲ್ಲಿ 1,74,302 ದನಗಳು ಹಾಗೂ 1,25,972 ಎಮ್ಮೆಗಳು ಇವೆ. ಯೋಜನೆ ಜಾರಿಯಾಗಿ ಒಂದು ವರ್ಷ ಕಳೆದರೂ ಗ್ರಾಮೀಣ ಪ್ರದೇಶದ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಹೀಗಾಗಿ ನಿರೀಕ್ಷೆಯಷ್ಟು ಜಾನುವಾರುಗಳ ವಿಮೆ ಆಗಿಲ್ಲ.ಪಶು ಚಿಕಿತ್ಸಾಲಯಗಳ ಸೂಚನಾ ಫಲಕಗಳಲ್ಲಿ ಮಾಹಿತಿ ಅಂಟಿಸಿದರೂ ಭಿತ್ತಿಗೆ ಸೀಮಿತವಾಗಿದೆ. ಪಂಚಾಯಿತಿ ಪಿಡಿಒಗಳು ಗ್ರಾಮಸಭೆ ಹಾಗೂ ಕರಪತ್ರಗಳ ಮೂಲಕ ಮಾಹಿತಿ ನೀಡುವ ಅಗತ್ಯ ಇದೆ ಎಂದು ರೈತರು ಹೇಳುತ್ತಾರೆ.

ADVERTISEMENT

‘ಪಶು ಆಸ್ಪತ್ರೆಗೆ ಹೋಗಿದ್ದಾಗ ಜಾನುವಾರುಗಳಿಗೆ ಉಚಿತ ವಿಮೆ ಮಾಡಿಸುತ್ತಿರುವ ಮಾಹಿತಿ ದೊರಕಿತು. ಹೀಗಾಗಿ ನಮ್ಮ ಹಸುವಿನ ವಿಮೆ ಮಾಡಿಸಿದ್ದೆ. ಕಾರಣಾಂತರದಿಂದ ಅದು ಮೃತಪಟ್ಟಾಗ ಆಘಾತ ಉಂಟಾಗಿತ್ತು. ವೈದ್ಯಾಧಿಕಾರಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ ಮೇಲೆ ಸರ್ಕಾರದಿಂದ ₹ 37 ಸಾವಿರ ವಿಮಾ ಪರಿಹಾರ ಬಂದಿದೆ’ ಎಂದು ಔರಾದ್‌ ತಾಲ್ಲೂಕಿನ ಈರಮ್ಮ ಪ್ರಭು ಹೇಳುತ್ತಾರೆ.

‘ಯೋಜನೆ ಕಳೆದ ವರ್ಷ ಆರಂಭವಾಗಿದೆ. ಗ್ರಾಮ ಮಟ್ಟದಲ್ಲಿ ಯೋಜನೆ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡಬೇಕಿದೆ.ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯ ಉಳಿಕೆ ಹಣದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಉಚಿತ ವಿಮಾ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ಹೇಳುತ್ತಾರೆ.

‘ಪರಿಶಿಷ್ಟ ಫಲಾನುಭವಿಗಳು ಜಾನುವಾರು ವಿಮೆ ಮಾಡಿಸಲು ಒಂದು ಪೈಸೆಯನ್ನೂ ಪಾವತಿಸಬೇಕಾಗಿಲ್ಲ. ಫಲಾನುಭವಿಗಳು ಸಂಬಂಧಪಟ್ಟ ದಾಖಲೆಗಳು ಒದಗಿಸಿದರೆ ಸಾಕು. ಸರ್ಕಾರ ಸಂಪೂರ್ಣ ವಿಮಾ ಕಂತನ್ನು ಪಾವತಿಸಲಿದೆ’ ಎಂದು ತಿಳಿಸುತ್ತಾರೆ.

ಜಾನುವಾರು ಆಕಸ್ಮಿಕವಾಗಿ ಮೃತಪಟ್ಟರೆ ಗರಿಷ್ಠ ₹ 50 ಸಾವಿರ ವರೆಗೆ ವಿಮಾ ಮೊತ್ತ ಮಾಲೀಕನಿಗೆ ದೊರೆಯಲಿದೆ. ಹೋರಿ, ಎತ್ತು, ಕೋಣ ಹಾಗೂ ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೇಲ್ಪಟ್ಟು 8 ವರ್ಷದೊಳಗಿನ ಮಣಕ, ಆಕಳು, ಎಮ್ಮೆಗಳನ್ನು ಒಟ್ಟಾರೆ ಮೂರು ವರ್ಷದ ವಿಮೆ ಯೋಜನೆಗೆ ಒಳಪಡಿಸಬಹುದಾಗಿದೆ. ವಿಮೆಗೆ ಒಳಪಡುವ ಜಾನುವಾರುಗಳ ಗುಣಚರ್ಯೆಗಳನ್ನು ದಾಖಲಿಸಿಕೊಂಡು, ಅದಕ್ಕೆ ಪೂರಕವಾಗಿ ಜಾನುವಾರುಗಳ ಕಿವಿಗೆ ಟ್ಯಾಗ್ ಹಾಕಲಾಗುತ್ತಿದೆ.

ಮೂರು ವರ್ಷದ ಕಂತನ್ನು ಸರ್ಕಾರ ಪಾವತಿಸುತ್ತಿದೆ. ಈ ಮೂರು ವರ್ಷದೊಳಗೆ ವಿಮೆ ವ್ಯಾಪ್ತಿಗೆ ಒಳಪಟ್ಟು ಜಾನುವಾರು ಮೃತಪಟ್ಟರೆ, ವಿಮೆ ಹಣಕ್ಕಾಗಿ ಅರ್ಜಿ ಸಲ್ಲಿಸಿ ಮಾಲೀಕರು ವಿಮೆ ಕಂಪನಿಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.