ಬೀದರ್: ‘ಶಿಕ್ಷಣ, ಆರೋಗ್ಯ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಭಾಜಿ ಬ್ರಿಗೇಡ್ 16ನೇ ವಾರ್ಷಿಕೋತ್ಸವ ಕಾರ್ಕ್ರಮ ನ. 30ರಂದು ಬೀದರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಬ್ರಿಗೇಡ್ ರಾಷ್ಟ್ರೀಯ ಅಧ್ಯಕ್ಷ ಮನೋಜ್ ಆಖರೆ ತಿಳಿಸಿದರು.
ಬ್ರಿಗೇಡ್ ಶಾಹು ಮಹಾರಾಜ್, ಛತ್ರಪತಿ ಶಿವಾಜಿ ಮಹಾರಾಜ, ಮಹಾತ್ಮ ಜ್ಯೋತಿಬಾ ಫುಲೆ, ಮಹಾತ್ಮ ಬಸವೇಶ್ವರ, ಡಾ. ಬಿ.ಆರ್.ಅಂಬೇಡ್ಕರ್, ಅಣ್ಣಾಭಾವು ಸಾಠೆ, ಮಹಾತ್ಮ ಚಕ್ರಧರ ಸ್ವಾಮಿ, ಸಂತ ತುಕಾರಾಮ, ಸಂತ ನಾಮದೇವ ಮಹಾರಾಜ ಅವರ ವಿಚಾರಧಾರೆ, ತತ್ವಾದರ್ಶಗಳ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅವುಗಳನ್ನು ವ್ಯಾಪಕವಾಗಿ ಪ್ರಚುರಪಡಿಸಲಾಗುತ್ತಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಹರಿಯಾಣ ಹಾಗೂ ದೇಶದ ಇತರೆ ರಾಜ್ಯಗಳಲ್ಲಿ ಈ ಸಂಘಟನೆ ರೈತರು, ಯುವಜನರು, ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ ಎಂದರು.
ಕರ್ನಾಟಕದಲ್ಲಿ ಮರಾಠ ಸಮಾಜವನ್ನು ‘2ಎ’ ಪ್ರವರ್ಗಕ್ಕೆ ಸೇರಿಸಬೇಕು. ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರು ಬದಲಿಸಬಾರದು. ದಾವಣಗೆರೆ ಜಿಲ್ಲೆಯ ಹುದಗಿರಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಮಹಾರಾಜರ ಸಮಾಧಿಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು. ಜೀಜಾಬಾಯಿ, ಶಹಾಜಿ ರಾಜೆ ಹಾಗೂ ಶಿವಾಜಿ ಮಹಾರಾಜರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು. ಪ್ರವಾಹದಿಂದ ಬೆಳೆ ಹಾನಿಯಾದವರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕೆಂದು ನಿರ್ಣಯ ಅಂಗೀಕರಿಸಲಾಗುವುದು ಎಂದು ಹೇಳಿದರು.
ಬ್ರಿಗೇಡ್ ಜಿಲ್ಲಾಧ್ಯಕ್ಷ ಸತೀಶ ವಾಸರೆ, ಪ್ರಮುಖರಾದ ಗಜಾನಂದ ಭೋಯರ್, ಸಂಕೇತ ಪಾಟೀಲ, ಜೆಜೆರಾವ್ ಪಾಟೀಲ, ಸತೀಶ್ ಪಾಟೀಲ ಮಹಾಗಾಂವಕರ್, ಸಂಜೀವಕುಮಾರ ಪಾಟೀಲ, ದತ್ತಾ ಪಾಟೀಲ, ರಾಮ ರಾವಣಗಾವೆ, ಗೋವಿಂದ ಪಾಟೀಲ, ರತಿಕಾಂತ ಬಿರಾದಾರ, ದತ್ತಾತ್ರೇಯ ಪಾಟೀಲ, ಸಂತೋಷ ಪಾಟೀಲ, ಸಂತೋಷ ಬಿರಾದಾರ, ಅಂಕುಶ ಪಾಟೀಲ, ದತ್ತಾ ಚೌಪಡೆ, ಪ್ರಶಾಂತ ಬಿರಾದಾರ, ಜ್ಞಾನೇಶ್ವರ ಸಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.