
ಬಸವಕಲ್ಯಾಣ: ‘ಸಮಾಜದ ಅಭಿವೃದ್ಧಿ ಕೈಗೊಳ್ಳುವ ಜೊತೆಗೆ ಸನಾತನ ಸಂಸ್ಕೃತಿಯ ಸಂರಕ್ಷಣೆಗೂ ಶ್ರಮಿಸಬೇಕು' ಎಂದು ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಸಲಹೆ ನೀಡಿದ್ದಾರೆ.
ನಗರದ ತ್ರಿಪುರಾಂತದಲ್ಲಿನ ಮೌನೇಶ್ವರ ದೇವಸ್ಥಾನದಲ್ಲಿ ಜಾತ್ರೆ ಅಂಗವಾಗಿ ಶನಿವಾರ ನಡೆದ ಸಾಮೂಹಿಕ ಉಪನಯನ ಸಂಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಶ್ವಕರ್ಮ ಸಮಾಜವು ಪಂಚ ಕಸಬುಗಳನ್ನು ಕೈಗೊಳ್ಳುವ ಜೊತೆಗೆ ವೈದಿಕ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಉಪನಯನ ಸಂಸ್ಕಾರ ಮಾಡಿಸಬೇಕು. 16 ವರ್ಷದೊಳಗಿನವರಿಗೆ ಉಪನಯನ ಸಂಸ್ಕಾರ ಕಡ್ಡಾಯ. ನಿತ್ಯವೂ ಗಾಯತ್ರಿ ಉಪಾಸನೆ ಮತ್ತು ಸಂಧ್ಯಾವಂದನೆ ಕೈಗೊಳ್ಳಬೇಕು, ತಮ್ಮ ಗೋತ್ರ, ಸೂತ್ರ, ಪ್ರವರಾದಿಯಾಗಿ ಎಲ್ಲವನ್ನೂ ಅರಿತುಕೊಂಡಿರಬೇಕು’ ಎಂದರು.
‘ಮೌನೇಶ್ವರ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಂಡಿರುವುದಕ್ಕೆ ಸಂತಸ ಆಗುತ್ತಿದೆ. ಇನ್ನೂ ಹೆಚ್ಚಿನ ರಚನಾತ್ಮಕ ಕಾರ್ಯಗಳನ್ನು ನಡೆಸಬೇಕು’ ಎಂದರು.
ಕಾರ್ಯಕ್ರಮದಲ್ಲಿ 36 ವಟುಗಳಿಗೆ ಉಪನಯನ ಮಾಡಿಸಿ ಬ್ರಹ್ಮೋಪದೇಶ ನೀಡಲಾಯಿತು. ಪದ್ಮಾಕರ ಆಚಾರ್ಯ, ಕೃಷ್ಣಾಚಾರ್ಯ ಮೀನಕೇರಾ, ದೇವೇಂದ್ರಾಚಾರ, ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಈರಣ್ಣ ಪಂಚಾಳ, ವೈಜನಾಥ ಪಂಚಾಳ, ಸೂರ್ಯಕಾಂತ ಪಂಚಾಳ, ಕಾಶಿನಾಥ ಪಂಚಾಳ, ವೀರಭದ್ರ ಪಂಚಾಳ, ಕೃಷ್ಣಾ ಪಂಚಾಳ, ಜಗನ್ನಾಥ ಪಂಚಾಳ, ಸುಭಾಷ ಪಂಚಾಳ, ಶಿವಶಂಕರ ಪಂಚಾಳ, ವಿಶ್ವನಾಥ ಪಂಚಾಳ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಧ್ವಜಾರೋಹಣ, ಮೌನೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಗಣಪತಿ ಪೂಜೆ ಇತ್ಯಾದಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.