ADVERTISEMENT

ಹೆಣ್ಣು ಭ್ರೂಣ ಹತ್ಯೆ ಮುಂದುವರಿದರೆ ಗಂಡಾಂತರ

ಸಹಜ ಶಿವಯೋಗದಲ್ಲಿ ಶಿವಮೂರ್ತಿ ಮುರುಘಾ ಶರಣರ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 15:26 IST
Last Updated 21 ಡಿಸೆಂಬರ್ 2019, 15:26 IST
ಬೀದರ್‌ನ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಪ್ರಯುಕ್ತ ಶುಕ್ರವಾರ ನಡೆದ ಸಹಜ ಶಿವಯೋಗದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು
ಬೀದರ್‌ನ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಪ್ರಯುಕ್ತ ಶುಕ್ರವಾರ ನಡೆದ ಸಹಜ ಶಿವಯೋಗದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು   

ಬೀದರ್: ‘ಭ್ರೂಣ ಹತ್ಯೆ ಮಹಾ ಅಪರಾಧ. ಮಗು ಹೆಣ್ಣಿರಲಿ, ಗಂಡಿರಲಿ ಎರಡೂ ಸರಿಸಮಾನ. ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಖಂಡಿತ ಗಂಡಾಂತರ ಕಾದಿದೆ’ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ಶರಣ ಸಂಸ್ಕೃತಿ ಉತ್ಸವ ಪ್ರಯುಕ್ತ ನಡೆಯುತ್ತಿರುವ ಸಹಜ ಶಿವಯೋಗದಲ್ಲಿ ಶನಿವಾರ ಮಾತನಾಡಿದರು.

‘ಒಬ್ಬ ಗರ್ಭಿಣಿ ತನ್ನ ಯಜಮಾನನಿಗೆ ವಿರುದ್ಧವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಆಕೆಯನ್ನು ಸಂಕುಚಿತ ಮನೋಭಾವದಿಂದ ನೋಡಲಾಗುತ್ತದೆ. ಇದು ಬಹಳ ನೋವಿನ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಮಹಾಭಾರತದ ಪಂಚ ಪಾಂಡವರಿಗೆ ದ್ರೌಪದಿ ಒಬ್ಬಳೇ ಹೆಂಡತಿಯಾಗಿದ್ದಳು. ಅಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದಾದರೆ ಹೆಣ್ಣು ಹಾಗೂ ಗಂಡು ಎಂಬ ಭೇದ ಭಾವ ಮಾಡಬಾರದು’ ಎಂದು ತಿಳಿಸಿದರು.

‘ಹಿಂದೆ ಮಠಗಳು ಆಶ್ರಮಗಳಾಗಿದ್ದವು. ಆದರೆ ಇಂದು ಆಶ್ರಯದ ತಾಣಗಳಾಗಿವೆ. ಅನಾಥ, ಅಬಲೆಯರು, ಕಡು ಬಡ ಮಕ್ಕಳಿಗೆ ಮಠದಲ್ಲಿ ಆಶ್ರಯ ನೀಡುತ್ತಿವೆ’ ಎಂದರು.

‘ಒಂದು ಮಗು ಹುಟ್ಟಿದಾಗ ನಗುನಗುತ್ತಾ ಇರುತ್ತದೆ. ಮುಂದೆ ಬೆಳೆದಂತೆ ಮನುಷ್ಯ ದ್ವೇಷ, ಮಾತ್ಸರ್ಯಕ್ಕೆ ಒಳಗಾಗುತ್ತಾನೆ. ದ್ವೇಷ, ಮಾತ್ಸರ್ಯ ಬೆಳೆಸಿಕೊಂಡಂತೆ ಜೀವನದ ನೆಮ್ಮದಿ, ಆನಂದ ಕಳೆದುಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ದ್ವೇಷ, ಅಸೂಯೆಯನ್ನು ಬೆಳೆಸಿಕೊಳ್ಳದೆ ನಗುನಗುತ್ತಾ ಬಾಳಬೇಕು’ ಎಂದು ತಿಳಿಸಿದರು.

ಸಾಯಗಾಂವದ ಶಿವಾನಂದ ದೇವರು, ಎಂಜಿನಿಯರ್‌್ ಹಾವಶೆಟ್ಟಿ ಪಾಟೀಲ, ಬಸವ ಸೇವಾ ಪ್ರತಿಷ್ಠಾನದ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಸ್.ಆರ್. ಮಠಪತಿ, ಗುತ್ತಿಗೆದಾರ ಭೀಮರಾವ್ ಮರಕಲ್‌, ಕಸಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜೈಶ್ರೀ ಸಕಾಲೆ, ಮೇನಕಾ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಶಕುಂತಲಾ ವಾಲಿ, ಮಹಾನಂದಾ ಹಿರೇಮಠ, ಸಿದ್ರಾಮ ಸೀತಾ, ಗುತ್ತಿಗೆದಾರ ಭೀಮರಾವ್ ಮರಕಲ್, ವಿಜಯಲಕ್ಷ್ಮಿ ಕೌಟಗೆ, ಕಸ್ತೂರಿ ಪಟಪಳ್ಳಿ, ನೀಲಮ್ಮ ರೂಗನ್, ಡಾ. ವಿಜಯಶ್ರೀ ಬಶೆಟ್ಟಿ, ಸಿ.ಎಸ್. ಗಣಾಚಾರಿ, ಡಾ.ಜಗದೀಶ ಜಾಬಾ, ಭಾರತಿ ಪಾಟೀಲ ಇದ್ದರು.

ತೋಟಪ್ಪ ಉತ್ತಂಗಿ ಹಾಗೂ ನವಲಿಂಗ ಪಾಟೀಲ ವಚನ ಗಾಯನ ನಡೆಸಿಕೊಟ್ಟರು. ಬಸವ ಕೇಂದ್ರ ಮಹಿಳಾ ಘಟಕದ ಗೌರವಾಧ್ಯಕ್ಷೆ ಕರುಣಾ ಶೆಟಕಾರ ಸ್ವಾಗತಿಸಿದರು. ಪ್ರೊ.ವಿದ್ಯಾವತಿ ಬಲ್ಲೂರ ನಿರೂಪಿಸಿದರು. ಶಿಲ್ಪಾ ಮಜಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.