ADVERTISEMENT

ಮಾಸಿಮಾಡ: ಸರ್ಕಾರಿ ಪ್ರೌಢಶಾಲೆಯಲ್ಲಿಲ್ಲ ಕನ್ನಡ, ವಿಜ್ಞಾನ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 8:35 IST
Last Updated 20 ನವೆಂಬರ್ 2022, 8:35 IST
ಖಟಕಚಿಂಚೋಳಿ ಸಮೀಪದ ಮಾಸಿಮಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆ
ಖಟಕಚಿಂಚೋಳಿ ಸಮೀಪದ ಮಾಸಿಮಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆ   

ಖಟಕಚಿಂಚೋಳಿ: ಸಮೀಪದ ಮಾಸಿಮಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಹಾಗೂ ವಿಜ್ಞಾನ ವಿಷಯ ಬೋಧಿಸುವ ಕಾಯಂ ಶಿಕ್ಷಕರಿಲ್ಲದಿರುವುದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿನ್ನಡೆಯಾಗಬಹುದು ಎಂಬ ಆತಂಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಇನ್ನು ಮೂರು ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿವೆ. ಸದ್ಯ ಕನ್ನಡ ವಿಷಯ ಬೋಧಿಸುವ ಅತಿಥಿ ಶಿಕ್ಷಕರಿಗೆ ಬೇರೆಡೆ ನೇಮಕಾತಿ ಆಗಿದೆ. ಹೀಗಾಗಿ ಅವರು ಯಾವಾಗಬೇಕಾದರೂ ಹೋಗಬಹುದು. ಇದರಿಂದ ಮುಂದೇನು ಎಂಬ ಚಿಂತೆ ಎದುರಾಗಿದೆ.

ಕಾಯಂ ಶಿಕ್ಷಕರು ಕಳೆದ ವರ್ಷವೇ ಬೇರೆಡೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಹೀಗಾಗಿ ಆ ವಿಷಯ ಬೋಧಿಸುವ ಶಿಕ್ಷಕರಿಲ್ಲ. ಇನ್ನೂ ಅತಿಥಿ ಶಿಕ್ಷಕರು ಯಾವಾಗಬೇಕಾದರೂ ಬಿಟ್ಟು ಹೋಗಬಹುದು. ಅವರಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಹೀಗಾಗಿ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ADVERTISEMENT

ನಮ್ಮ ಶಾಲೆಯಲ್ಲಿ ಕನ್ನಡ ಹಾಗೂ ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕರಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮುಖ್ಯಶಿಕ್ಷಕ ಓಂಕಾರ ಬಲ್ಲೂರೆ ಅವರು ತಿಳಿಸುತ್ತಾರೆ.

‘ಕಳೆದ ವರ್ಷದಿಂದ ಕನ್ನಡ, ವಿಜ್ಞಾನ ಬೋಧಿಸುವ ಶಿಕ್ಷಕರಿಲ್ಲ. ಮೇಲಧಿಕಾರಿಗಳು ಕೇವಲ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ.

ಈಗ ವಾರ್ಷಿಕ ಪರೀಕ್ಷೆಯ ಸಮಯವಿದೆ. ಈಗಲಾದರೂ ಅಧಿಕಾರಿಗಳು ಸುಳ್ಳು ಭರವಸೆ ನೀಡುವುದನ್ನು ಬಿಡಿ, ನಮಗೆ ಶಿಕ್ಷಕರನ್ನು ಕೊಡಿ, ನಾವು ಅಭ್ಯಾಸ ಮಾಡಬೇಕು’ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುವ ವಾತಾವರಣ ನಿರ್ಮಾಣವಾಗಿದೆ. ಅಂಥ ವರ್ಷವಿಡೀ ಶಿಕ್ಷಕರೇ ಇಲ್ಲದೇ ಇರುವುದರಿಂದ ಮುಂದಿನ ವರ್ಷದಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಆಗುವ ಸಾಧ್ಯತೆ ಕಾಣುತ್ತಿದೆ ಎಂಬುದು ಪಾಲಕರ ಮನದಾಳದ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.