ADVERTISEMENT

ಏಳನೆಯ ಆರ್ಥಿಕ ಗಣತಿಗೆ ಸಹಕರಿಸಿ

ಉಪ ವಿಭಾಗಾಧಿಕಾರಿ ಶಂಕರ ವಣಕ್ಯಾಳ ಮನವಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 15:08 IST
Last Updated 14 ಜೂನ್ 2019, 15:08 IST
ಬೀದರ್‌ನ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಗ್ರಾಹಕರ ಸೇವಾ ಕೇಂದ್ರ,ಜಿಲ್ಲಾ ವ್ಯವಸ್ಥಾಪಕರು ಹಾಗೂ ಗ್ರಾಮಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿ ಶರಣಯ್ಯ ಮಠಪತಿ ಮಾತನಾಡಿದರು
ಬೀದರ್‌ನ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಗ್ರಾಹಕರ ಸೇವಾ ಕೇಂದ್ರ,ಜಿಲ್ಲಾ ವ್ಯವಸ್ಥಾಪಕರು ಹಾಗೂ ಗ್ರಾಮಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿ ಶರಣಯ್ಯ ಮಠಪತಿ ಮಾತನಾಡಿದರು   

ಬೀದರ್: ‘ಸರಕುಗಳ ಉತ್ಪಾದನೆ, ವಿತರಣೆ ಮತ್ತು ಮಾರಾಟ ಸೇವೆಗಳ ಚಟುವಟಿಕೆಗಳು ಒಳಗೊಂಡಂತೆ ಏಳನೇ ಆರ್ಥಿಕ ಗಣತಿಯು ಜೂನ್‌ 15 ರಿಂದ ಆರಂಭವಾಗುತ್ತಿದೆ. ಇದಕ್ಕೆ ವಿವಿಧ ಇಲಾಖೆಗಳು ಅವರವರ ಹಂತದಲ್ಲಿ ಸಹಕಾರ ನೀಡಬೇಕು’ ಎಂದುಉಪ ವಿಭಾಗಾಧಿಕಾರಿ ಶಂಕರ ವಣಕ್ಯಾಳ ಮನವಿ ಮಾಡಿದರು.

ನಗರದ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಸಾಮಾನ್ಯ ಗ್ರಾಹಕರ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಗ್ರಾಮಮಟ್ಟದ ಗಣತಿದಾರರಿಗೆ ಆಯೋಜಿಸಿದ್ದ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಣತಿದಾರರು ಮನೆಗೆ ಬಂದಾಗ ಅವರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಏಳನೇ ಆರ್ಥಿಕ ಗಣತಿಯು ಜೂನ್ 15ರಿಂದ ಸೆಪ್ಟೆಂಬರ್ 15ರವರೆಗೆ ಮೂರು ತಿಂಗಳ ಕಾಲ ನಡೆಯಲಿದೆ. ಕಾಮನ್ ಸರ್ವಿಸ್ ಸೆಂಟರ್ಸ್‌ನವರು ಮೊದಲನೇ ಹಂತದ ಗಣತಿ ಮಾಡುವರು. ಎರಡನೇ ಹಂತದ ಗಣತಿಯ ಮೇಲ್ವಿಚಾರಣೆಯನ್ನು ಕೈಗಾರಿಕಾ ಇಲಾಖೆ ಹಾಗೂ ಸಾಂಖ್ಯಿಕ ಇಲಾಖೆ ಮತ್ತು ಎನ್‍ಎಸ್‍ಎಸ್‍ಒ ಇಲಾಖೆಯವರು ಗಣತಿ ಮಾಡುವರು’ ಎಂದು ತಿಳಿಸಿದರು.

ಬಸವಕಲ್ಯಾಣ ಉಪ ವಿಭಾಗ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ್ ಮಾತನಾಡಿ,‘ ಈ ಆರ್ಥಿಕ ಗಣತಿಯು ದೇಶದ ಭೌಗೋಳಿಕ ಗಡಿಯೊಳಗೆ ನೆಲೆಗೊಂಡು ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ –ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಘಟಕಗಳ ಪೂರ್ಣ ಎಣಿಕೆಯಾಗಿರುತ್ತದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿ ಶರಣಯ್ಯ ಮಠಪತಿ ಮಾತನಾಡಿ, ‘ಎಲ್ಲ ಗಣತಿದಾರರು ಮನೆಗೆ ಹೋದಾಗ ಸಾರ್ವಜನಿಕರು ಸರಿಯಾಗಿ ಮಾಹಿತಿ ಕೊಡಬೇಕು. ಗಣತಿ ಮಾಡುವ ಸಿಬ್ಬಂದಿಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಹಕಾರ ನೀಡಬೇಕು. ಹೆಣ್ಣು ಮಕ್ಕಳ ವಯಸ್ಸಿನ ಬಗ್ಗೆ ಹಾಗೂ ಕುಟುಂಬದ ಆದಾಯದ ಬಗ್ಗೆ ಹೆಚ್ಚು ಕಡಿಮೆ ಅಂಕಿ ಸಂಖ್ಯೆ ನೀಡುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಗಣತಿದಾರರು ಕೂಲಂಕುಷವಾಗಿ ಪರಿಶೀಲಿಸಿ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್ವರ, ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ವಾಡಿ, ಎನ್‍ಎಸ್‍ಎಸ್‌ಒದ ಮಲ್ಲಯ್ಯ ಹೊಸಮನಿ, ಸಿಎಸ್‍ಸಿಯ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ ಬಿರಾದಾರ, ಸಚಿನ ಉಪ್ಪೆ, ಜಿಲ್ಲಾ ಸಂಯೋಜಕ ಮಹೇಶ, ಸಹಾಯಕ ಸಾಂಖ್ಯಿಕ ಅಧಿಕಾರಿ ಪ್ರಶಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.