ADVERTISEMENT

ಕೋವಿಡ್‍: ಸಂಕಷ್ಟಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಿಗ ಶಾಹೀನ್ ಕೇರ್ಸ್ ಯೋಜನೆ

ಶೇ 60 ರಷ್ಟು ಶುಲ್ಕ ಭರಿಸಲಿರುವ ಶಾಹೀನ್ ಫೌಂಡೇಶನ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 13:51 IST
Last Updated 10 ಜೂನ್ 2021, 13:51 IST
ಅಬ್ದುಲ್ ಖದೀರ್
ಅಬ್ದುಲ್ ಖದೀರ್   

ಬೀದರ್: ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ‘ಶಾಹೀನ್ (ಕಮ್ಯುನಿಟೀಸ್ ಏಡ್ ಆ್ಯಂಡ್ ರೆಸ್ಪಾನ್ಸ್ ಫಾರ್ ಎಜುಕೇಶನಲ್ ಸಪೋರ್ಟ್) ಕೇರ್ಸ್’ ಯೋಜನೆ ಪ್ರಕಟಿಸಿದೆ.

ಕೋವಿಡ್‍ನಿಂದಾಗಿ ಬಹಳ ಪಾಲಕರಿಗೆ ಮಕ್ಕಳ ಶೈಕ್ಷಣಿಕ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಸ್ಥೆ ಸಮುದಾಯದ ಸಹಭಾಗಿತ್ವದೊಂದಿಗೆ ಅಂಥ ಮಕ್ಕಳ ಶಿಕ್ಷಣ ಮುಂದುವರಿಕೆಗೆ ಯೋಜನೆ ರೂಪಿಸಿದೆ ಎಂದು ಝೂಮ್ ಆ್ಯಪ್ ಬಳಸಿ ನಗರದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ . ಅಬ್ದುಲ್ ಖದೀರ್ ತಿಳಿಸಿದರು.

ಕೋವಿಡ್ ಮೊದಲ ಹಾಗೂ ಎರಡನೇ ಅಲೆ ಜನಸಾಮಾನ್ಯರ ಮೇಲೆ ಬಹಳ ಪರಿಣಾಮ ಬೀರಿದೆ. ಅನೇಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಶ್ರೀಮಂತ ಹಾಗೂ ಬಡ ವಿದ್ಯಾರ್ಥಿಗಳ ನಡುವಿನ ಅಂತರ ಹೆಚ್ಚಿಸಿದೆ. ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ದೂರ ಉಳಿಯುವಂತಹ ಪರಿಸ್ಥಿತಿ ನಿರ್ಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಶಾಹೀನ್ ಕೇರ್ಸ್ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತುಂಗಕ್ಕೆ ಸಹಕಾರಿಯಾಗಲಿದೆ. ಸಮುದಾಯ ಕೇಂದ್ರ, ಮಸೀದಿ, ದೇವಾಲಯ, ಚರ್ಚ್, ಯುವಕರ ಗುಂಪು, ನಿರ್ದಿಷ್ಟ ಪ್ರದೇಶದ ನಾಗರಿಕರು ಯೋಜನೆಯನ್ನು ಅಳವಡಿಸಿಕೊಳ್ಳಬಹುದು. ಶಾಹೀನ್ ಪರಿಕಲ್ಪನೆಯನ್ನು ದೇಶದಾದ್ಯಂತ ಹರಡಲು ಕೈಜೋಡಿಸಬಹುದು ಎಂದು ಹೇಳಿದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಸಮುದಾಯದಿಂದ ದೇಣಿಗೆ ಸಂಗ್ರಹಿಸಿ ಬೀದರ್ ಜಿಲ್ಲೆಯ ಶಾಹೀನ್ ಶಾಲೆ, ಕಾಲೇಜು ಅಥವಾ ಶಾಹೀನ್‍ನ ದೇಶದ ಯಾವುದೇ ಶಾಖೆಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಜೆಇಇ ಹಾಗೂ ನೀಟ್ ತರಬೇತಿಯೊಂದಿಗೆ 11ನೇ, 12ನೇ, ಯುಪಿಎಸ್ಸಿ ತರಬೇತಿಯೊಂದಿಗೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪದವಿ, ಮದರಸಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 9ನೇ ಪ್ರವೇಶ, ಬ್ರಿಡ್ಜ್‍ಕೋರ್ಸ್ ಮತ್ತು ಪಿಯುಸಿ ಪ್ರಥಮ ಹಾಗೂ ದ್ವಿತೀಯ ಶಿಕ್ಷಣ ಪಡೆಯಲು ನೆರವಾಗಬಹುದು ಎಂದು ತಿಳಿಸಿದರು.

ಯೋಜನೆಯಡಿ ಸಮುದಾಯ ನಿಧಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕದ ಶೇ 40 ರಷ್ಟನ್ನು ಭರಿಸಿದರೆ, ಉಳಿದ ಶೇ 60 ರಷ್ಟನ್ನು ಶಾಹೀನ್ ಫೌಂಡೇಶನ್ ಭರಿಸಲಿದೆ ಎಂದು ಹೇಳಿದರು.

ಶಾಹೀನ್ ಡಿಸ್ಟೆನ್ಸ್ ಲರ್ನಿಂಗ್ ಪ್ರೋಗ್ರಾಂ ಅಡಿಯಲ್ಲಿ ಸಂಸ್ಥೆ ಜುಲೈ 13 ರ ವರೆಗೆ ಎಸ್ಸೆಸ್ಸೆಲ್ಸಿ ಆನ್‍ಲೈನ್ ಸರಣಿ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ http://www.shaheendlp.com ನೋಡಬಹುದು ಎಂದು ತಿಳಿಸಿದರು.

ಶಾಹೀನ್ ಶಿಕ್ಷಣ ಸಂಸ್ಥೆಯು ಕಳೆದ ವರ್ಷ 400ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳನ್ನು ಗಳಿಸಿದೆ. ಕಾಲೇಜಿನ ಕಾರ್ತಿಕ ರೆಡ್ಡಿ ನೀಟ್‍ನಲ್ಲಿ ದೇಶಕ್ಕೆ 9ನೇ ಹಾಗೂ ರಾಜ್ಯಕ್ಕೆ ಮೊದಲ ರ್‍ಯಾಂಕ್ ಗಳಿಸಿ ಇತಿಹಾಸ ನಿರ್ಮಿಸಿದ್ದರು. ಸಂಸ್ಥೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯಹಸ್ತ ಚಾಚುವ ಜತೆಗೆ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ಶ್ರಮಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.