ಭಾಲ್ಕಿ: ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಶೇಖ್ ಅಬ್ದುಲ್ ನಸೀರ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಶಕ್ತಿ ಯೋಜನೆ ರಾಜ್ಯದ ಹೆಣ್ಣು ಮಕ್ಕಳ ಬದುಕಿಗೆ ಶಕ್ತಿ ತುಂಬಿದೆ. ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ರಾಜ್ಯದ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುವ ಮೂಲಕ ಯೋಜನೆಯನ್ನು ಸ್ಮರಣೀಯವಾಗಿಸಿದ್ದಾರೆ’ ಎಂದರು.
‘ಶಕ್ತಿ ಯೋಜನೆಯನ್ನು ಜಾರಿಗೊಳಿಸಿ 2 ವರ್ಷಗಳು ಪೂರ್ಣಗೊಂಡಿದ್ದು, 500 ಕೋಟಿಗೂ ಹೆಚ್ಚು ಮಹಿಳೆಯರು ರಾಜ್ಯ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ’ ಎಂದು ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ವಿಲಾಸ ಪಾಟೀಲ, ಸಂಗಮೇಶ ವಾಲೆ, ಧನರಾಜ ಪಾಟೀಲ, ಓಂಕಾರ ರಾಮಶಟ್ಟೆ, ಸತೀಶ ಮಾಳಗೆ, ಶ್ರೀನಿವಾಸ ಮೇತ್ರೆ, ಬೀದರ್ ವಿಭಾಗದ ಲೆಕ್ಕಾಧಿಕಾರಿ ಧೂಳಪ್ಪಾ ಮೂಡಬಿಕರ್, ಸಂಜಕುಮಾರ ಚಿದ್ರೆ, ಬಸ್ ಚಾಲಕ, ನಿರ್ವಾಹಕರು ಇದ್ದರು. ಬಸ್ ಘಟಕದ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಸ್ವಾಗತಿಸಿ, ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.