ಬಸವಕಲ್ಯಾಣ: ‘ನಗರದಲ್ಲಿ ನಿರ್ಮಿಸುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಜೀವನ, ಸಾಧನೆ ಬಿಂಬಿಸುವ ಶಿವಸೃಷ್ಟಿಗೆ ₹700 ಕೋಟಿ ಅನುದಾನ ಒದಗಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದರು.
ನಗರದ ಬಿಕೆಡಿಬಿ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮರಾಠಾ ನೌಕರರ ಸಂಘ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ರಾಜಮಾತಾ ಜೀಜಾವು ಪ್ರತಿಭಾ ಪುರಸ್ಕಾರ’ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಾಜ್ಯದವರ ಹಾಗೂ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಜನರ ಶ್ರದ್ಧೆಯ ಕೇಂದ್ರವಾಗುವಂತೆ ಶಿವಸೃಷ್ಟಿ ರೂಪಗೊಳ್ಳಲಿದೆ. ಎಷ್ಟೇ ಕಷ್ಟ ಎದುರಾದರೂ ಎದೆಗುಂದದೆ ಮುನ್ನಡೆದವರೇ ಯಶಸ್ಸು ಸಾಧಿಸುತ್ತಾರೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಮಾತನಾಡಿ,‘ಸಮಾಜದ ಕೆಲಸಕ್ಕಾಗಿ ಸದಾ ಸಿದ್ಧನಿದ್ದೇನೆ. ನಾನು ಸಹ ಶಿಕ್ಷಕನಾಗಿ ಕೆಲಸ ನಿರ್ವಹಿಸಿದ್ದರಿಂದ ಶೈಕ್ಷಣಿಕ ಪ್ರಗತಿಯ ಬಗ್ಗೆ ಯಾವಾಗಲೂ ಕಾಳಜಿ ಉಂಟಾಗುತ್ತದೆ’ ಎಂದು ಹೇಳಿದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ,‘ಜೀಜಾಬಾಯಿಯ ಪ್ರಯತ್ನದ ಕಾರಣ ಶಿವಾಜಿಯ ಬೆಳವಣಿಗೆ ಆಯಿತು. ಇಂದಿನ ತಾಯಂದಿರು ಸಹ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಶಿವಸೃಷ್ಟಿ ಉತ್ತಮ ರೀತಿಯಲ್ಲಿ ನಿರ್ಮಾಣಗೊಳ್ಳಲಿ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ,‘ಖಡ್ಗ ಅಲ್ಲ, ಮೆದುಳಿನಿಂದ ಕೆಲಸ ನಿರ್ವಹಿಸುವ ಕಾಲವಿದು. ಶಿಕ್ಷಣಕ್ಕೆ ಮಹತ್ವ ನೀಡಬೇಕು. ಕಷ್ಟದ ಮಧ್ಯೆಯೇ ಸತತ ಪರಿಶ್ರಮದಿಂದ ಸಾಧನೆಗೈಯಬೇಕು. ಮಕ್ಕಳ ಯಶಸ್ಸಿನಲ್ಲಿ ತಂದೆ ತಾಯಿಯ ಪಾತ್ರವೂ ದೊಡ್ಡದಿದೆ’ ಎಂದು ಹೇಳಿದರು.
ಕ್ಷತ್ರಿಯ ಮರಾಠಾ ಪರಿಷತ್ತಿನ ಮಾಜಿ ಅಧ್ಯಕ್ಷ ಅಂಗದರಾವ್ ಜಗತಾಪ, ನಗರ ಠಾಣೆ ಸಿಪಿಐ ಅಲಿಸಾಬ್, ನೌಕರರ ಸಂಘದ ಅಧ್ಯಕ್ಷ ಮಹೇಶ ಮುಳೆ, ಬಾಲಕೃಷ್ಣ ಪಾಟೀಲ, ಶ್ರೀಕಾಂತ ಚವ್ಹಾಣ, ಮದನ ಪಾಟೀಲ, ದತ್ತಾತ್ರಿ ಪವಾರ, ಗಿರಿಧರ ಧಾನೂರೆ, ದ್ವಾರಕಾಬಾಯಿ ಹಿಪ್ಪರ್ಗೆ ಹಾಗೂ ಭರತ ಹೆಂಬಾಡೆ ಮಾತನಾಡಿದರು.
ನಗರಸಭೆ ಅಧ್ಯಕ್ಷ ಸಗೀರುದ್ದೀನ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ಅರ್ಜುನ ಕನಕ, ಮುಖಂಡ ಅನಿಲ ಭೂಸಾರೆ, ಬಿಇಒ ಸಿದ್ದವೀರಯ್ಯ ರುದನೂರು, ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ, ಎಇಇ ರಮೇಶ ಪಾಟೀಲ, ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಅಕ್ಷರ ದಾಸೋಹ ಯೋಜನಾಧಿಕಾರಿ ಸಂಜೀವಕುಮಾರ ಕಾಂಗೆ ಹಾಗೂ ಡಾ.ರಾಜಕುಮಾರ ಬಿರಾದಾರ ಉಪಸ್ಥಿತರಿದ್ದರು.
ಮರಾಠಾ ಸಮಾಜದ ರಾಜರಾಗಿದ್ದ ಶಾಹು ಮಹಾರಾಜ ಸಯ್ಯಾಜಿರಾವ್ ಗಾಯಕವಾಡರು ದಲಿತರ ಹಿಂದುಳಿದವರ ಹಿತದೃಷ್ಟಿಯಿಂದ ಕೈಗೊಂಡ ಕಾರ್ಯ ಮರೆಯಲಾಗದುಎಂ.ಜಿ.ಮುಳೆ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.